ಅಯೋಧ್ಯೆ, 17 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯೆಯಲ್ಲಿ ತ್ರೇತಾಯುಗದ ವೈಭವ ಮರುಕಳಿಸಿದೆ. ರಾಮಮಂದಿರ ಉದ್ಘಾಟನೆಗೆ ಮುಂಚಿತವಾಗಿ ಧಾರ್ಮಿಕ ವಿಧಿವಿಧಾನಗಳು ಭರದಿಂದ ನಡೆಯುತ್ತಿವೆ. ಇಂದು ರಾಮನ ಭಕ್ತರು ಕಾತರದಿಂದ ಎದುರು ನೋಡ್ತಿದ್ದ ರಾಮಲಲ್ಲಾ ಮೂರ್ತಿ ಮೊದಲ ಬಾರಿಗೆ ದರ್ಶನವಾಗಲಿದೆ.
ರಾಮರಾಜ್ಯದಲ್ಲಿ ರಾಮನ ಆಗಮನಕ್ಕೆ ಭಕ್ತರು ಶಬರಿಯಂತೆ ಕಾತರದಿಂದ ಕಾಯ್ತಿದ್ದಾರೆ. ಎಲ್ಲೆಲ್ಲೂ ಸಡಗರ, ಸಂಭ್ರಮ ಮನೆಮಾಡಿದೆ. ದಶದಿಕ್ಕುಗಳಲ್ಲೂ ಮರ್ಯಾದಾ ಪುರುಷೋತ್ತಮನದ್ದೇ ಜಪ-ತಪ. ಭಜನೆ ಕೇಳಿಬರುತ್ತಿದೆ. ಅಯೋಧ್ಯೆಯ ಕಣ ಕಣವೂ ಭಕ್ತಿ ಭಾವದಿಂದ ಕೂಗಿ ಹೇಳುತ್ತಿದೆ.
ರಾಮರಾಜ್ಯದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ಶತಕೋಟಿಗೂ ಅಧಿಕ ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ. ನಿನ್ನೆಯಿಂದಲೇ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಅದ್ಧೂರಿಯಾಗಿ ಶುರುವಾಗಿದೆ. ಟ್ರಸ್ಟ್ನಿಂದ ನೇಮಕವಾದ ಅರ್ಚಕರಿಂದ ಪೂಜಾ ಕೈಂಕರ್ಯ ಶುರುವಾಗಿವೆ.
ಎಲ್ಲರೂ ಕಾತುರದಿಂದ ಕಾಯ್ತಿರೋದು ಆ ಒಂದು ಕ್ಷಣಕ್ಕೆ. ಈಗಾಗಲೇ ಭಕ್ತರ ಮನದಲ್ಲಿ ಶ್ರೀರಾಮ ಅಚ್ಚಳಿಯದೇ ಆರೂಢನಾಗಿದ್ದಾನೆ. ಆದ್ರೂ ಕೂಡ ಇಂದು ಬಾಲರಾಮನನ್ನು ನೋಡಲು ಆತನ ದರ್ಶನ ಮಾಡಲು ಭಕ್ತಸಾಗರ ಎದುರು ನೋಡ್ತಿದೆ. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ಅಯೋಧ್ಯೆ ರಾಮಮಂದಿರದ ಆವರಣವನ್ನು ಪ್ರವೇಶ ಮಾಡಲಿದೆ. ರಾಮಮಂದಿರದ ಕಾಂಪ್ಲೆಕ್ಸ್ನ 70 ಎಕರೆ ಜಾಗದಲ್ಲಿ ಮೂರ್ತಿಯ ಮೆರವಣಿಗೆಯಾಗಲಿದ್ದು, ಈ ವೇಳೆಯೇ ದೇಶದ ಜನರಿಗೆ ರಾಮಲಲ್ಲಾ ಮೂರ್ತಿಯ ಮೊದಲ ದರ್ಶನವಾಗಲಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಕರ್ಮಕುಟಿಯ ತಪಸ್ಸು ಹಾಗೂ ಪೂಜೆ ನೆರವೇರಲಿದೆ. ಮಂಗಳ ಕಳಸದಲ್ಲಿ ಸರಯೂ ನೀರಿನೊಂದಿಗೆ ಮಂದಿರವನ್ನು ಭಕ್ತರು ತಲುಪುಲಿದ್ದಾರೆ. ಇಂದಿನಿಂದ ಜನವರಿ 22 ರವರೆಗೆ ಗಣೇಶ್ವರ ಶಾಸ್ತ್ರಿದ್ರಾವಿಡ್, ಲಕ್ಷ್ಮಿಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠೆಯ ಪೂಜಾ ವಿಧಿವಿಧಾನ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್
