ಹೈದರಾಬಾದ್:ಆ್ಯಂಕರ್ :ಭೂಕಬಳಿಕೆ ಪ್ರಕರಣದಲ್ಲಿ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಸೋದರಳಿಯ ಕನ್ನ ರಾವ್ ಅವರನ್ನು ಬಂಧಿಸಲಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತೆಲಂಗಾಣದಲ್ಲಿ ರಾಜಕೀಯ ರಂಗೇರಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಆರ್ಎಸ್ಗೆ ಸಂಕಷ್ಟ ಎದುರಾಗಿದೆ.
ಒಂದೆಡೆ ಪಕ್ಷದ ಪ್ರಮುಖ ನಾಯಕರೆಲ್ಲ ಕಾಂಗ್ರೆಸ್ ಹಾದಿ ತುಳಿಯುತ್ತಿದ್ದರೆ, ಮತ್ತೊಂದೆಡೆ ಈಗಾಗಲೇ ದೆಹಲಿ ಮದ್ಯ ಹಗರಣದಲ್ಲಿ ಎಂ ಎಲ್ ಸಿ ಕಲ್ವಕುಂಟ್ಲ ಕವಿತಾ ಅವರನ್ನು ಇಡಿ ಬಂಧಿಸಿದೆ. ಭೂಕಬಳಿಕೆ ಆರೋಪದಲ್ಲಿ ಪೊಲೀಸರು ಈಗಾಗಲೇ ನೋಟಿಸ್ ನೀಡಿದ್ದರು. ಹೈದರಾಬಾದ್ ನ ಹೊರವಲಯದಲ್ಲಿರುವ ಎರಡು ಎಕರೆ ಜಾಗವನ್ನು ಕನ್ನರಾವ್ ಕಬಳಿಸಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಉದ್ಯಮಿ ಕನ್ನರಾವ್ ಸೇರಿದಂತೆ ಎಂಟು ಮಂದಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಓಎಸ್ಆರ್ ಪ್ರಾಜೆಕ್ಟ್ಸ್ ಎಂಬ ಖಾಸಗಿ ಕಂಪನಿ ಹಾಗೂ ಆರೋಪಿಗಳ ನಡುವೆ ಈ ವಿವಾದಿತ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇದೆ.
