ನವದೆಹಲಿ,
೨೦೨೪ರ ಸಾರ್ವತ್ರಿಕ ಚುನಾವಣೆಯ ಮೊದಲ ಹಂತಕ್ಕೆ ಇಂದು ಅಧಿಸೂಚನೆ ಪ್ರಕಟವಾಗಲಿದ್ದು, ಬಹುತೇಕ ಎರಡು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ನಡೆಯಲಿರುವ ಪ್ರಜಾಪ್ರಭುತ್ವ ಉತ್ಸವಕ್ಕೆ ದೇಶ ಸಜ್ಜಾಗುತ್ತಿದೆ.
ಚುನಾವಣೆಗಳ ಸಂದರ್ಭದಲ್ಲಿ ಎದುರಾಗಬಹುದಾದ ಯಾವುದೇ ಸವಾಲಿನ ನಿರ್ವಹಣೆಗೆ ಸೂಕ್ತ ವ್ಯವಸ್ಥೆಗಳು ದೇಶಾದ್ಯಂತ ಕಾರ್ಯಾರಂಭ ಮಾಡಿವೆ. ಈಗಾಗಲೇ ವರದಿಯಾಗಿರುವಂತೆ ಈ ಬಾರಿ ಲೋಕಸಭೆ ಚುನಾವಣೆ ಒಟ್ಟು ೭ ಹಂತಗಳಲ್ಲಿ ನಡೆಯಲಿದ್ದು, ಜೂನ್ ೪ ರಂದು ಮತ ಎಣಿಕೆ ನಿಗದಿಯಾಗಿದೆ. ಏಪ್ರಿಲ್ ೧೯ ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ೧೭ ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ ೧೦೨ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುವುದು. ನಾಮಪತ್ರಗಳ ಸಲ್ಲಿಕೆಗೆ ಈ ತಿಂಗಳ ೨೭ ಕಡೆಯ ದಿನ. ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ, ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಭರವಸೆ ನೀಡಿದೆ. ಹಣಬಲ, ತೋಳ್ಬಲ, ಸುಳ್ಳು ಸುದ್ದಿ ಪ್ರಚಾರ ಮತ್ತು ಮಾದರಿ ನೀತಿ ಸಂಹಿತೆ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ನಿರ್ವಹಿಸಲಾಗುವುದು. ದೇಶಾದ್ಯಂತ, ರಾಜ್ಯ ಮತ್ತು ಜಿಲ್ಲಾ ಗಡಿ ಪ್ರದೇಶಗಳಲ್ಲಿ ೨೪ ತಾಸು ಕಾರ್ಯ ನಿರ್ವಹಿಸುವ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಅಕ್ರಮಗಳ ಮೇಲೆ ನಿಗಾ ಇಡಲು ಡ್ರೋನ್ ವಿಮಾನಗಳನ್ನು ಬಳಸಲಾಗುವುದು ಎಂದು ಆಯೋಗ ತಿಳಿಸಿದೆ.
