ನವದೆಹಲಿ, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಸಂವಿಧಾನ ದಿನದಂದು ರಾಷ್ಟ್ರದ ನಾಗರಿಕರಿಗೆ ಬರೆದ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, “ಭಾರತೀಯ ಸಂವಿಧಾನ ದೇಶದ ಅಭಿವೃದ್ಧಿಗೆ ನಿಜವಾದ ಮಾರ್ಗದರ್ಶಕ, ನನ್ನಂತಹ ಬಡ ಕುಟುಂಬದ ವ್ಯಕ್ತಿಗೂ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದೆ” ಎಂದು ಹೇಳಿದ್ದಾರೆ.
1949ರ ನವೆಂಬರ್ 26ರಂದು ಸಂವಿಧಾನ ಅಂಗೀಕೃತವಾದ ಐತಿಹಾಸಿಕ ಕ್ಷಣವನ್ನು ಸ್ಮರಿಸಿದ ಪ್ರಧಾನಿ, 2015ರಿಂದ ಈ ದಿನವನ್ನು ಸಂವಿಧಾನ ದಿನವೆಂದು ಆಚರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮತದಾನದ ಹಕ್ಕು ಸಂವಿಧಾನ ನೀಡಿದ ಮಹತ್ವದ ವರ ಎಂದು ಉಲ್ಲೇಖಿಸಿದ ಅವರು, ಮತದಾನವನ್ನು ಎಂದಿಗೂ ತಪ್ಪಿಸಕೂಡದು ಪ್ರತಿವರ್ಷ ನವೆಂಬರ್ 26ರಂದು ಹೊಸ ಮತದಾರರನ್ನು ಗೌರವಿಸುವ ಸಂಪ್ರದಾಯವನ್ನು ಶಾಲೆಗಳು ಬೆಳೆಸಬೇಕು ಎಂದು ಸಲಹೆ ನೀಡಿದ್ದಾರೆ.
ಸಂವಿಧಾನ ದಿನವು ಆಚರಣೆ ಜೊತೆಗೆ ಆತ್ಮಾವಲೋಕನದ ದಿನ ಎಂದೂ ಪ್ರಧಾನಿಯವರು ಅಭಿಪ್ರಾಯಪಟ್ಟಿದ್ದಾರೆ. ಪ್ರಜಾಪ್ರಭುತ್ವ ಬಲಪಡಿಸಲು ಪ್ರತಿ ನಾಗರಿಕರೂ ನಿಷ್ಠೆಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಕರೆ ನೀಡಿದರು.
ವಿಧಿ 51Aಯಲ್ಲಿ ನಿಗದಿಮಾಡಿರುವ ಮೂಲಭೂತ ಕರ್ತವ್ಯಗಳನ್ನು ಸ್ಮರಿಸಿದ ಅವರು, ಮಹಾತ್ಮ ಗಾಂಧಿಯವರ ಕರ್ತವ್ಯ ಪಾಲನೆ ಮಾಡಿದಾಗ ಹಕ್ಕುಗಳು ಸ್ವತಃ ಬರುತ್ತವೆ ಎಂದಿದ್ದಾರೆ.
ಜಮ್ಮು–ಕಾಶ್ಮೀರಕ್ಕೆ 370ನೇ ವಿಧಿ ರದ್ದಾದ ನಂತರ ಸಂವಿಧಾನದ ಸಂಪೂರ್ಣ ಜಾರಿಗೆ ಬಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಭಾರತದ ಭವಿಷ್ಯವನ್ನು ಉಲ್ಲೇಖಿಸಿದ ಮೋದಿ, “ಇನ್ನು 25 ವರ್ಷಗಳಲ್ಲಿ ಸ್ವಾತಂತ್ರ್ಯದ 100 ವರ್ಷ; 2049ರಲ್ಲಿ ಸಂವಿಧಾನದ ಶತಮಾನ. ಇಂದು ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ಪೀಳಿಗೆಗಳ ಜೀವನವನ್ನು ರೂಪಿಸಲಿವೆ” ಎಂದು ಹೇಳಿದ್ದಾರೆ.
ವಿಕಸಿತ ಭಾರತದ ಗುರಿ ಸಾಧಿಸಲು ನಾಗರಿಕರು ಕರ್ತವ್ಯಪ್ರಥಮ ಮನೋಭಾವ ಹೊಂದಬೇಕೆಂದು ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
