ದೆಹಲಿ,29ಅಕ್ಟೋಬರ್ (ಹಿ.ಸ):
ಆ್ಯಂಕರ್ :ದೇಶದಲ್ಲಿ ಈ ತಿಂಗಳು ಖಾದಿ ಉತ್ಪನ್ನಗಳ ಮಾರಾಟ ದಾಖಲೆ ನಿರ್ಮಿಸಿದ್ದು, ಇದರಿಂದ ಅನೇಕ ವರ್ಗಗಳಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕಾಶವಾಣಿಯ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಂದು ತಿಳಿಸಿದರು.
೧೦ ವರ್ಷಗಳ ಹಿಂದೆ ದೇಶದಲ್ಲಿ ಖಾದಿ ಉತ್ಪನ್ನಗಳ ಮಾರಾಟಕ್ಕೆ ಸಾಕಷ್ಟು ಶ್ರಮಿಸಿದರೂ ೩೦ ಸಾವಿರ ಕೋಟಿ ರೂಪಾಯಿಗಿಂತ ಕಡಿಮೆ ವಹಿವಾಟು ನಡೆಯುತ್ತಿತ್ತು. ಆದರೆ ಈಗ ಇದು ವೃದ್ಧಿಗೊಂಡು ಸುಮಾರು ೧.೨೫ ಲಕ್ಷ ಕೋಟಿ ರೂಪಾಯಿಗೆ ತಲುಪುತ್ತಿದೆ. ಈ ಮಾರಾಟದ ಲಾಭ ನಮ್ಮ ನೇಕಾರರು, ಕುಶಲಕರ್ಮಿಗಳು, ರೈತರು, ಆಯುರ್ವೇದ ಸಸ್ಯಗಳನ್ನು ನೆಡುವ ಗುಡಿ ಕೈಗಾರಿಕೆಗಳು ಮತ್ತು ಪ್ರತಿಯೊಬ್ಬರಿಗೂ ಲಭಿಸುತ್ತದೆ. ಇದುವೆ ವೋಕಲ್ ಫಾರ್ ಲೋಕಲ್ ಅಭಿಯಾನದ ಶಕ್ತಿಯಾಗಿದೆ ಎಂದು ಹೇಳಿದರು.
ಯಾವುದೇ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಕಲಾವಿದರ ಉತ್ಪನ್ನಗಳನ್ನು ಖರೀದಿಸಲು ಮುಂದಾಗಬೇಕು. ಅದಕ್ಕಾಗಿಯೇ ಜನತೆ ತಮ್ಮ ಬಜೆಟ್ನಲ್ಲಿ ಸ್ವಲ್ಪ ಹಣ ಮೀಸಲಿಡಬೇಕೆಂದು ಕರೆ ನೀಡಿದ ಪ್ರಧಾನಿ, ಪ್ರತಿ ಬಾರಿಯಂತೆ ಈ ಬಾರಿಯೂ ನಮ್ಮ ಹಬ್ಬಗಳಲ್ಲಿ ವೋಕಲ್ ಫಾರ್ ಲೋಕಲ್ ನಮ್ಮ ಆದ್ಯತೆಯಾಗಿರಬೇಕು ಎಂದು ಒತ್ತಿ ಹೇಳಿದರು.
ಇಂದು ಭಾರತ ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ. ಅನೇಕ ದೊಡ್ಡ ಬ್ರಾಂಡ್ಗಳು ಇಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸುತ್ತಿವೆ. ಇವುಗಳನ್ನು ನಾವು ಒಪ್ಪಿಕೊಂಡಲ್ಲಿ ಮೇಕ್ ಇನ್ ಇಂಡಿಯಾಗೆ ಹೆಚ್ಚು ಪ್ರಚಾರ ಸಿಗುತ್ತದೆ. ಈ ವಸ್ತುಗಳನ್ನು ಖರೀದಿಸುವಾಗ ದೇಶದ ಹೆಮ್ಮೆಯಾದ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆ ಮೂಲಕ ಪಾವತಿ ಮಾಡುವುದನ್ನು ಮರೆಯಬೇಡಿ ಎಂದು ನರೇಂದ್ರ ಮೋದಿ ಹೇಳಿದರು.
ಭಾರತದಲ್ಲಿ ಭಾರತೀಯರೇ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ, ದೀಪಾವಳಿ ಸಂಭ್ರಮ ಆಚರಿಸಿದರೆ ಅದರ ಹೊಳಪು ಇನ್ನಷ್ಟು ಹೆಚ್ಚಲಿದೆ ಎಂದು ಹೇಳಿದ ಪ್ರಧಾನಿ, ಇದೇ ೩೧ರಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿ ಆಚರಿಸಲಾಗುತ್ತಿದ್ದು, ಗುಜರಾತ್ನ ಏಕತಾ ಪ್ರತಿಮೆ ಬಳಿ ಪ್ರಧಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಜತೆಗೆ ದೆಹಲಿಯ ಕರ್ತವ್ಯಪಥದಲ್ಲೂ ಒಂದು ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ದೇಶಾದ್ಯಂತ ಹಳ್ಳಿ ಮತ್ತು ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸುವ ಅಭಿಯಾನ ನಡೆಯುತ್ತಿದ್ದು, ಸಾವಿರಾರು ಅಮೃತಕಲಶಗಳ ಯಾತ್ರೆ ಈಗ ದೆಹಲಿ ತಲುಪುತ್ತಿದೆ. ಈ ಪವಿತ್ರ ಮಣ್ಣಿನಿಂದ ದೆಹಲಿಯಲ್ಲಿ ಅಮೃತ ವಾಟಿಕಾ ನಿರ್ಮಾಣವಾಗಲಿದೆ. ಇದೇ ೩೧ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಮುಕ್ತಾಯಗೊಳ್ಳಲಿದ್ದು, ಎಲ್ಲರೂ ಒಗ್ಗೂಡಿ ಇತಿಹಾಸ ಸೃಷ್ಟಿಸಲಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.
ಸರ್ದಾರ್ ಸಾಹೇಬ್ ಅವರ ಜನ್ಮದಿನದಂದು ನನ್ನ ಯುವ ಭಾರತ ಎಂಬ ಸಂಘಟನೆ ನಿರ್ಮಾಣವಾಗುತ್ತಿದ್ದು, ಭಾರತದ ಯುವಕರಿಗೆ ವಿವಿಧ ರಾಷ್ಟ್ರ ನಿರ್ಮಾಣ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರವಹಿಸಲು ಇದು ಅವಕಾಶ ಒದಗಿಸುತ್ತದೆ ಎಂದು ಹೇಳಿದ ಪ್ರಧಾನಿ, ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತ ನೂರಾರ ಹನ್ನೊಂದು ೧೧೧ ಪದಕಗಳನ್ನು ಗೆದ್ದು, ಇತಿಹಾಸ ನಿರ್ಮಿಸಿರುವ ಕ್ರೀಡಾಪಟುಗಳ ಅದ್ಭುತ ಯಶಸ್ಸನ್ನು ಶ್ಲಾಘಿಸಿದರು.
ಮುಂಬರುವ ದೀಪಾವಳಿ ಹಬ್ಬದ ಸಮಯದಲ್ಲಿ ಯಾವುದೇ ಅಗ್ನಿ ಅವಘಡಗಳು ಸಂಭವಿಸುವ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ೧೦೬ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ತೆರೆ ಎಳೆದರು.
ಹಿಂದೂಸ್ತಾನ್ ಸಮಾಚಾರ್
