ನವದೆಹಲಿ, 19 ಆಗಸ್ಟ್ (ಹಿ.ಸ.):
ಆ್ಯಂಕರ್:ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಹಿಂದಿರುಗಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೋಮವಾರ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ತಮ್ಮ ಬಾಹ್ಯಾಕಾಶ ಯಾನದ ಅನುಭವಗಳನ್ನು ಹಂಚಿಕೊಂಡರು.
ಈ ಭೇಟಿಯ ವೀಡಿಯೊವನ್ನು ಪ್ರಧಾನಿ ಮೋದಿ ಇಂದು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಜೊತೆಗೆ ಶುಭಾಂಶು ಸುಕ್ಲಾ ನಡೆಸಿರುವ ಸಂಭಾಷಣೆಯ ವಿವರ ಇಲ್ಲಿದೆ…
ಪ್ರಧಾನಿ ಮೋದಿ ಹಾಸ್ಯಮಿಶ್ರಿತವಾಗಿ “ನಿಮ್ಮ ಮನೆಕೆಲಸ ಮುಗಿದಿದೆಯೇ?” ಎಂದು ಪ್ರಶ್ನಿಸಿದುದು ಸಂಭಾಷಣೆಯ ವಿಶೇಷ ಅಂಶವಾಗಿ ಪರಿಣಮಿಸಿತು. ಶುಕ್ಲಾ ಅವರು ಉತ್ತರಿಸುತ್ತಾ– “ಮಿಷನ್ ಯಶಸ್ವಿಯಾಗಿದೆ, ಆದರೆ ಇದು ಅಂತ್ಯವಲ್ಲ, ಹೊಸ ಆರಂಭ. ನಮ್ಮ ದೇಶಕ್ಕೆ ಇನ್ನಷ್ಟು ಕಲಿಕೆಯ ದಾರಿ ತೆರೆದಿದೆ” ಎಂದರು.
ಬಾಹ್ಯಾಕಾಶದ ಅನುಭವ
ಶುಕ್ಲಾ ಅವರು ಬಾಹ್ಯಾಕಾಶದಲ್ಲಿ ಮಾನವ ದೇಹ ಎದುರಿಸಬೇಕಾದ ಸವಾಲುಗಳ ಬಗ್ಗೆ ವಿವರಿಸಿದರು. “ಮೊದಲ ನಾಲ್ಕು-ಐದು ದಿನ ದೇಹ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ನೆಲದ ಮೇಲೆ ನಡೆದುಬರುವುದು ಸಹ ಅಸಾಧ್ಯವೆನಿಸುತ್ತದೆ. ದೇಹದ ಸ್ನಾಯುಗಳಲ್ಲಿ ಶಕ್ತಿ ಇದ್ದರೂ, ಮೆದುಳು ಹೊಸ ಪರಿಸರಕ್ಕೆ ಮರು-ಸಂವೇದಿ ಆಗಲು ಸಮಯ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು.
ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಲಾವಧಿ
ಪ್ರಸ್ತುತ ಅಂತರಿಕ್ಷ ನಿಲ್ದಾಣದಲ್ಲಿ ಗರಿಷ್ಠ 8 ತಿಂಗಳುಗಳ ಕಾಲ ಉಳಿಯುವ ವ್ಯವಸ್ಥೆ ಇದೆ ಎಂದು ಅವರು ಮಾಹಿತಿ ನೀಡಿದರು.
ಭಾರತೀಯ ಬೀಜಗಳ ಪ್ರಯೋಗ
ಭಾರತೀಯ ಆಹಾರ ಸಂಶೋಧನೆ ಕುರಿತೂ ಅವರು ಬೆಳಕು ಚೆಲ್ಲಿದರು. ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಸರು ಬೇಳೆ ಮತ್ತು ಮೆಂತ್ಯೆ ಬೀಜಗಳ ಬೆಳವಣಿಗೆ ಯಶಸ್ವಿಯಾಗಿದೆ ಎಂದು ತಿಳಿಸಿದರು. “ಆಹಾರ ಬಾಹ್ಯಾಕಾಶ ಯಾನದ ದೊಡ್ಡ ಸವಾಲು. ಸಣ್ಣ ಜಾಗದಲ್ಲಿ ಹೆಚ್ಚು ಪೌಷ್ಟಿಕಾಂಶ ಒದಗಿಸುವುದು ಮುಖ್ಯ. ಈ ಬೀಜಗಳು ಕೇವಲ ಎಂಟು ದಿನಗಳಲ್ಲಿ ಮೊಳಕೆಯೊಡೆಯಲು ಆರಂಭಿಸಿದವು. ಭಾರತೀಯ ಪರಿಣತಿ ಇಲ್ಲಿಯೂ ಮೆರೆದಿದೆ” ಎಂದು ಹೇಳಿದರು.
ವಿಶ್ವದ ಕುತೂಹಲ – ಗಗನಯಾನ
ಶುಕ್ಲಾ ಅವರು ತಮ್ಮ ಅನುಭವ ಹಂಚಿಕೊಳ್ಳುತ್ತಾ – “ವಿದೇಶಿ ವಿಜ್ಞಾನಿಗಳು ಭಾರತ ಮಾಡುತ್ತಿರುವ ಕಾರ್ಯಗಳಿಗೆ ವಿಶೇಷ ಆಸಕ್ತಿ ತೋರಿದರು. ಗಗನಯಾನ ಮಿಷನ್ ಯಾವಾಗ ಎಂಬ ಪ್ರಶ್ನೆ ಹಲವರು ಕೇಳಿದರು. ನನ್ನ ತಂಡದ ಸದಸ್ಯರು ಸಹಿ ಪಡೆದು, ಗಗನಯಾನ ಉಡಾವಣೆಗೆ ನಾವು ನಿಮ್ಮನ್ನು ಆಹ್ವಾನಿಸುತ್ತೇವೆ ಎಂದು ಬರೆದಿದ್ದರು” ಎಂದು ಹೇಳಿದರು.
ಮುಂದಿನ ಗುರಿ – ಅಂತರಿಕ್ಷ ಯಾತ್ರಿಕರ ಸಮೂಹ
ಶುಕ್ಲಾ ಅವರು ಭಾರತದಲ್ಲಿ ಅಂತರಿಕ್ಷ ಯಾತ್ರಿಕರ ದೊಡ್ಡ ಸಮೂಹ ನಿರ್ಮಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. “ನಮ್ಮ ಬಳಿ 40-50 ಜನರು ಯಾವಾಗಲೂ ಸಿದ್ಧರಾಗಿರಬೇಕು. ನಾನು ಚಿಕ್ಕವನಿದ್ದಾಗ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಹೋದರು, ಆದರೆ ನಮ್ಮ ಬಳಿ ಯಾವುದೇ ಕಾರ್ಯಕ್ರಮವಿರಲಿಲ್ಲ. ಆದರೆ ಈಗ ಮಕ್ಕಳು ನನಗೆ ಕೇಳುತ್ತಾರೆ – ನಾನು ಹೇಗೆ ಅಂತರಿಕ್ಷ ಯಾತ್ರಿಕನಾಗಬಹುದು? ಇದು ಭಾರತದ ಸಾಧನೆ” ಎಂದರು.
ಪ್ರಧಾನಿಯವರ ಪ್ರತಿಕ್ರಿಯೆ
ಪ್ರಧಾನಿ ಮೋದಿ ಅವರು ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. “ಚಂದ್ರಯಾನ–2 ವಿಫಲವಾದರೂ ಭಾರತ ಹಿಂಜರಿಯಲಿಲ್ಲ. ಚಂದ್ರಯಾನ–3 ಯಶಸ್ವಿಯಾದದ್ದು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ವಿಫಲತೆಯ ನಂತರವೂ ಮುಂದುವರಿಯುವ ದೃಢಸಂಕಲ್ಪವೇ ನಮ್ಮ ಬಲ. ಭಾರತ ಜಗತ್ತಿನಲ್ಲಿ ನಾಯಕತ್ವದ ಪಾತ್ರ ವಹಿಸುವ ಮಟ್ಟಕ್ಕೆ ಬಂದಿದೆ” ಎಂದು ಹೇಳಿದರು.
—————
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
