ಪುದುಕೊಟ್ಟೈ, 7 ಜನವರಿ(ಹಿ.ಸ):
ಆ್ಯಂಕರ್ :ಸುಪ್ರೀಂಕೋರ್ಟ್ ಗ್ರೀನ್ಸಿಗ್ನಲ್ ಬಳಿಕ ತಮಿಳುನಾಡಿನಲ್ಲಿ ಈ ವರ್ಷದ ಮೊದಲ ಜಲ್ಲಿಕಟ್ಟು ಸ್ಪರ್ಧೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಪ್ರಾಣವನ್ನು ಪಣಕ್ಕೊಡ್ಡಿ ನಡೆದ ರಣರೋಚಕ ಜಲ್ಲಿಕಟ್ಟು ಸ್ಪರ್ಧೆ ವೇಳೆ ನೆತ್ತರು ಚಿಮ್ಮಿದೆ. 12 ಗೂಳಿಗಳನ್ನು ಪಳಗಿಸಿದ ಯುವಕ ಬೈಕ್ ಅನ್ನು ಬಹುಮಾನವಾಗಿ ಗೆದ್ದಿದ್ದಾನೆ. ಇದೇ ಮೊದಲ ಬಾರಿಗೆ ಗಡಿದಾಟಿ ಶ್ರೀಲಂಕಾದಲ್ಲೂ ಜಲ್ಲಿಕಟ್ಟು ಮೋಡಿ ಮಾಡಿದೆ.
ತಮಿಳುನಾಡಿನಲ್ಲಿ ಪೊಂಗಲ್ ಸಂಪ್ರದಾಯಕ ಜಲ್ಲಿಕಟ್ಟು ಕಳೆಗಟ್ಟಿದೆ. ಜನಗಳ ಹರ್ಷೋದ್ಗಾರ, ಕೇಕೆಗಳ ನಡುವೆ ಹಗ್ಗ ಬಿಚ್ಚಿ ಬಿಟ್ಟ ಗೂಳಿ ಮೇಲೆ ಎರಗುವ ಉತ್ಸಾಹಿ ಯುವಕರು ಹೋರಿಯ ಭುಜ ಹಿಡಿದು ನಿಯಂತ್ರಿಸುವಲ್ಲಿ ಯಾರು ಸಫಲರಾಗ್ತಾರೋ ಅವರಿಗೆ ವಿಶೇಷ ಮನ್ನಣೆ ಸಿಗುತ್ತೆ. ಪುದುಕೊಟ್ಟೈ ಜಿಲ್ಲೆಯ ತಚನಕುರಿಚಿ ಗ್ರಾಮದಲ್ಲಿ ಆರಂಭವಾದ ಮೊದಲ ಸ್ಪರ್ಧೆ ವೇಳೆ ಸುಮಾರು 53 ಮಂದಿ ಗಾಯಗೊಂಡಿದ್ದಾರೆ. 6 ಮಂದಿ ಗೂಳಿ ಪಳಗಿಸುವವರು, 9 ಹೋರಿಗಳ ಮಾಲೀಕರು ಸೇರಿ 53 ಮಂದಿ ಗಾಯಗೊಂಡಿದ್ದಾರೆ. ಸುಮಾರು 750 ಗೂಳಿಗಳನ್ನು ಅಖಾಡಕ್ಕೆ ಇಳಿಸಲಾಗಿತ್ತು.
ತಚನಕುರಿಚಿ ಗ್ರಾಮದಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 12 ಗೂಳಿಗಳನ್ನು ಪಳಗಿಸಿದ ತಮಿಳುಸೆಲ್ವನ್ ಎಂಬ ಯುವಕನಿಗೆ ಬೈಕ್ ಅನ್ನು ಬಹುಮಾನವಾಗಿ ನೀಡಲಾಯ್ತು. ಪ್ರಶಸ್ತಿ ಗೆದ್ದಿದ್ದಕ್ಕೆ ತಮಿಳುಸೆಲ್ವನ್ ಸಂತಸ ವ್ಯಕ್ತಪಡಿಸಿದ್ದಾನೆ. ಈ ಹಿಂದೆ ಎರಡು ಬಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ ಪ್ರಥಮ ಬಹುಮಾನ ಪಡೆದಿರುವುದು ಇದೇ ಮೊದಲು. ಬಹುಮಾನ ಗೆದ್ದಿದ್ದು ಖುಷಿ ಕೊಟ್ಟಿದೆ. ನನ್ನನ್ನು ಪ್ರೋತ್ಸಾಹಿಸಿದ ನನ್ನ ಸ್ನೇಹಿತರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.ತಮಿಳುನಾಡಿನ ಜನಪ್ರಿಯ ಕ್ರೀಡೆ ಜಲ್ಲಿಕಟ್ಟು ಇದೇ ಮೊದಲ ಬಾರಿಗೆ ಗಡಿ ದಾಟಿ ಶ್ರೀಲಂಕಾದಲ್ಲೂ ಆಯೋಜನೆಗೊಂಡಿತ್ತು. ಶ್ರೀಲಂಕಾದ ಟ್ರಿಂಕೋಮಲಿಯಲ್ಲಿ ನಿನ್ನೆ ಆರಂಭವಾದ ಸ್ಪರ್ಧೆಗೆ ಲಂಕಾ ಪೂರ್ವ ಪ್ರಾಂತ್ಯದ ಗವರ್ನರ್ ಸೆಂಥಿಲ್ ತೊಂಡಮನ್ ಸ್ಪರ್ಧೆಗೆ ಚಾಲನೆ ನೀಡಿದ್ರು. ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಗೂಳಿಗಳು ಭಾಗವಹಿಸಿದ್ದವು. 5 ಸಾವಿರಕ್ಕೂ ಹೆಚ್ಚು ಮಂದಿ ಜಲ್ಲಿಕಟ್ಟು ವೀಕ್ಷಿಸಲು ಆಗಮಿಸಿದ್ದರು.. ಸ್ಪರ್ಧೆಯಲ್ಲಿ ವಿಜೇತರಾದವರು ಬಹುಮಾನಗಳನ್ನು ಪಡೆದು ಖುಷಿಪಟ್ರು.
ಹಿಂದೂಸ್ತಾನ್ ಸಮಾಚಾರ್
