ನವದೆಹಲಿ, 12 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕಲ್ಲಿದ್ದಲು ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆ, ದಕ್ಷತೆ ಮತ್ತು ತಡೆರಹಿತ ಪೂರೈಕೆಯ ಮೂಲಕ ಸುಧಾರಿಸಲು ಕೇಂದ್ರ ಸರ್ಕಾರವು “ಕಲ್ಲಿದ್ದಲು ಸೇತು” ಹೆಸರಿನ ಹೊಸ ಹರಾಜು ನೀತಿಗೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ನೀತಿಯು 2016ರ ಎನ್‌ಆರ್‌ಎಸ್ (ನಿಯಂತ್ರಿತವಲ್ಲದ ವಲಯ) ಸಂಪರ್ಕ ಹರಾಜು ನೀತಿಗೆ ಕಲ್ಲಿದ್ದಲು ಸೇತು ಎಂಬ ಪ್ರತ್ಯೇಕ ವಿಂಡೋ ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ಕಲ್ಲಿದ್ದಲು ರಫ್ತಿಗೆ ದೀರ್ಘಾವಧಿಯ ಕಲ್ಲಿದ್ದಲು ಸಂಪರ್ಕಗಳನ್ನು ಹರಾಜು ಆಧಾರದ ಮೇಲೆ ಹಂಚಿಕೆ ಮಾಡಲು ಅವಕಾಶ ಮಾಡಿಕೊಡುತ್ತದೆ.
ಪ್ರಸ್ತುತ ಎನ್‌ಆರ್‌ಎಸ್ ನೀತಿಯನ್ವಯ ಸಿಮೆಂಟ್, ಉಕ್ಕು (ಕೋಕಿಂಗ್ ಹೊರತುಪಡಿಸಿ), ಸ್ಪಾಂಜ್ ಐರನ್, ಅಲ್ಯೂಮಿನಿಯಂ ಸೇರಿದಂತೆ ಹಲವು ವಲಯಗಳಿಗಾಗಿ, ಹಾಗೆಯೇ ಅವುಗಳ ಕ್ಯಾಪ್ಟಿವ್ ಪವರ್ ಪ್ಲಾಂಟ್‌ಗಳಿಗೆ, ಹೊಸ ಕಲ್ಲಿದ್ದಲು ಸಂಪರ್ಕಗಳನ್ನು ಹರಾಜು ವಿಧಾನದಿಂದ ನೀಡಲಾಗುತ್ತದೆ. ಆದರೆ ಇದುವರೆಗೆ ಈ ಸಂಪರ್ಕಗಳು ನಿರ್ದಿಷ್ಟಪಡಿಸಿದ ಅಂತಿಮ ಬಳಕೆದಾರ ಉಪ-ವಲಯಗಳಿಗೆ ಮಾತ್ರ ಸೀಮಿತವಾಗಿದ್ದವು.
ಹೊಸ “ಕಲ್ಲಿದ್ದಲು ಸೇತು” ಮೂಲಕ ಯಾವುದೇ ದೇಶೀಯ ಕೈಗಾರಿಕಾ ಖರೀದಿದಾರರೂ ಹರಾಜಿನಲ್ಲಿ ಭಾಗವಹಿಸಲು ಅವಕಾಶ, ಹೀಗಾಗಿ ಕಲ್ಲಿದ್ದಲು ವಲಯದಲ್ಲಿ ಮತ್ತಷ್ಟು ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆಯ ವಾತಾವರಣ ಉಂಟಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
