ನವದೆಹಲಿ, 07 ಜುಲೈ (ಹಿ.ಸ.) :
ಆ್ಯಂಕರ್ : ಪ್ರಸಕ್ತ ವರ್ಷ ಬಿಹಾರ ವಿಧಾನ ಸಭೆಗೆ ಚುಣಾವಣೆ ನಡೆಯಲಿರುವ ಹಿನ್ನೆಲೆ ಚುನಾವಣೆ ಆಯೋಗ ಮತದಾರರ ಪಟ್ಟಿಯ ವಿಶೇಷ ಕ್ಷಿಪ್ರ ಪರಿಷ್ಕರಣೆಗೆ (ಎಸ್‌ಐಆರ್) ಆದೇಶಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠದ ಮುಂದೆ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎ.ಎಂ. ಸಿಂಘ್ವಿ ವಿಷಯವನ್ನು ಪ್ರಸ್ತಾಪಿಸಿ, ಈ ವಿಷಯದ ಬಗ್ಗೆ ತುರ್ತು ವಿಚಾರಣೆ ಕೋರಿದರು.
ನಿರ್ದಿಷ್ಟ ದಾಖಲೆಗಳೊಂದಿಗೆ ನಮೂನೆಗಳನ್ನು ಸಲ್ಲಿಸಲು ವಿಫಲರಾದ ಮತದಾರರು, ಕಳೆದ ಇಪ್ಪತ್ತು ವರ್ಷಗಳಿಂದ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಸಹ, ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಟ್ಟಿರುವ ಕಾರಣ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಕೀಲರು ವಾದಿಸಿದರು. 8 ಕೋಟಿ ಮತದಾರರಿದ್ದು, 4 ಕೋಟಿ ಜನರ ಜನಗಣತಿ ಮಾಡಬೇಕಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಈ ವಿಷಯದಲ್ಲಿ ನೋಟಿಸ್ ಜಾರಿ ಮಾಡುವಂತೆ ಸಿಬಲ್, ಪೀಠವನ್ನು ಕೋರಿದರು. ಸಂಕ್ಷಿಪ್ತವಾಗಿ ಪ್ರಕರಣ ಆಲಿಸಿದ ನಂತರ, ಗುರುವಾರ ಅರ್ಜಿಗಳನ್ನು ಪರಿಶೀಲಿಸಲು ಪೀಠ ಸಮ್ಮತಿಸಿತು. ಎಸ್‌ಐಆರ್ ಅನ್ನು ಪ್ರಶ್ನಿಸಿ ಇಲ್ಲಿಯವರೆಗೆ ನಾಲ್ಕು ಅರ್ಜಿಗಳನ್ನು ಸಲ್ಲಿಸಲಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್, ಲೋಕಸಭಾ ಸಂಸದ ಮಹುವಾ ಮೊಯಿತ್ರಾ ಮತ್ತು ರಾಜ್ಯಸಭಾ ಸಂಸದ ಮನೋಜ್ ಝಾ ಅವರು ಅರ್ಜಿ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
