ತಿರುಚಿರಾಪಳ್ಳಿ, 2 ಜನವರಿ(ಹಿ.ಸ):
ಆ್ಯಂಕರ್ :ಪ್ರಧಾನಮಂತ್ರಿ ನರೇಂದ್ರ ಮೋದಿ ತಮಿಳುನಾಡು ಮತ್ತು ಲಕ್ಷದ್ವೀಪಕ್ಕ ಇಂದಿನಿಂದ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಬೆಳಿಗ್ಗೆ ಪ್ರಧಾನಿ ಮೋದಿ ಅವರು ತಮಿಳುನಾಡಿನ ತಿರುಚಿರಾಪಳ್ಳಿಗೆ ತಲುಪಲಿದ್ದಾರೆ. ಅಲ್ಲಿ ಭಾರತಿದಾಸನ್ ವಿಶ್ವವಿದ್ಯಾಲಯದ ೩೮ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ತಿರುಚಿರಾಪಳ್ಳಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿಯವರು ೧೯ ಸಾವಿರದ ೮೫೦ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿಮಾನಯಾನ, ರೈಲು, ರಸ್ತೆ, ತೈಲ ಮತ್ತು ಅನಿಲ, ಹಡಗು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿಯವರು ವಿವಿಧ ರೈಲ್ವೆ ಯೋಜನೆಗಳನ್ನು ಕೂಡ ದೇಶಕ್ಕೆ ಸಮರ್ಪಿಸಲಿದ್ದಾರೆ.
ಇವುಗಳಲ್ಲಿ ೪೧.೪ ಕಿಲೋಮೀಟರ್ ಸೇಲಂ-ಮ್ಯಾಗ್ನೆಸೈಟ್ ಜಂಕ್ಷನ್, ಓಮಲೂರ್-ಮೆಟ್ಟೂರು ಅಣೆಕಟ್ಟು ವಿಭಾಗದ ಜೋಡಿ ರೈಲ್ವೇ ಮಾರ್ಗ ಯೋಜನೆಗಳು ಒಳಗೊಂಡಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿರುಚ್ಚಿ – ಕಲ್ಲಾಗಮ್ ವಿಭಾಗದ ೩೯ ಕಿಲೋಮೀಟರ್ ಉದ್ದದ ರಸ್ತೆ, ೬೦ ಕಿಲೋಮೀಟರ್ ಉದ್ದದ ಕಲ್ಲಾಗಮ್ – ಮೀನ್ಸುರುಟ್ಟಿ ವಿಭಾಗದ ರಸ್ತೆ, ಚೆಟ್ಟಿಕುಲಂನ ನಾಥಮ್ ವಿಭಾಗದ ೨೯ ಕಿಲೋಮೀಟರ್ ಚತುಷ್ಪಥ ರಸ್ತೆಯನ್ನು ಕೂಡ ಲೋಕಾರ್ಪಣೆಗೊಳಿಸಲಿದ್ದಾರೆ.
ಪ್ರಧಾನಮಂತ್ರಿಯವರು ಕಾಮರಾಜರ್ ಬಂದರಿನ ಜನರಲ್ ಕಾರ್ಗೋ ಬರ್ತ್-II ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಕಲ್ಪಾಕ್ಕಂನ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ (ಐಜಿಸಿಎಆರ್) ನಲ್ಲಿರುವ ಡೆಮಾನ್ಸ್ಟ್ರೇಷನ್ ಫಾಸ್ಟ್ ರಿಯಾಕ್ಟರ್ ಫ್ಯೂಯಲ್ ರಿಪ್ರೊಸೆಸಿಂಗ್ ಪ್ಲಾಂಟ್ (ಡಿಎಫ್ಆರ್ಪಿ) ನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಬಳಿಕ ಲಕ್ಷದ್ವೀಪದ ಅಗಟ್ಟಿ ತಲುಪಲಿರುವ ಪ್ರಧಾನಿ ಅಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬುಧವಾರದಂದು ಪ್ರಧಾನಿ ಮೋದಿಯವರು ಲಕ್ಷದ್ವೀಪದ ಕವರಟ್ಟಿಗೆ ತಲುಪಲಿದ್ದಾರೆ.
ಲಕ್ಷದ್ವೀಪದ ಮೊದಲ ಬ್ಯಾಟರಿ ಬೆಂಬಲಿತ ಸೌರ ವಿದ್ಯುತ್ ಯೋಜನೆಯಾದ ಕವರಟ್ಟಿ ಸೌರ ವಿದ್ಯುತ್ ಸ್ಥಾವರ ರಾಷ್ಟ್ರಕ್ಕೆ ಸಮರ್ಪಿತವಾಗಿರುವ ಇತರ ಯೋಜನೆಗಳಲ್ಲಿ ಒಂದಾಗಿದೆ.
ಹಿಂದೂಸ್ತಾನ್ ಸಮಾಚಾರ್
