ಮಾಸ್ಕೋ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಗುರುವಾರ ಕ್ರೆಮ್ಲಿನ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದರು.
ಉಭಯ ದೇಶಗಳ ದೀರ್ಘಕಾಲೀನ ಸಂಬಂಧ ಬಲಪಡಿಸುವ ವಿಷಯಗಳ ಜೊತೆ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಗೆ ಸಂಬಂಧಿಸಿದ ಅಂಶಗಳ ಬಗ್ಗೆ ಚರ್ಚಿಸಲಾಯಿತು.
ಜೈಶಂಕರ್ ಅವರು ತಮ್ಮ ಮೂರು ದಿನಗಳ ರಷ್ಯಾ ಪ್ರವಾಸದ ಅಂಗವಾಗಿ ಮೊದಲು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮತ್ತು ಉಪ ಪ್ರಧಾನ ಮಂತ್ರಿ ಡೆನಿಸ್ ಮಾಂಟುರೊವ್ ಅವರನ್ನು ಭೇಟಿಯಾಗಿದ್ದರು.
ಈ ಸಭೆಗಳ ಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ರಷ್ಯಾದ TASS ಸಂಸ್ಥೆಯ ಪ್ರಕಾರ, ಪುಟಿನ್ ಅವರನ್ನು ಭೇಟಿಯಾದ ನಂತರ ಲಾವ್ರೊವ್ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್, ಎರಡನೇ ಮಹಾಯುದ್ಧದ ನಂತರ ಭಾರತ-ರಷ್ಯಾ ಸಂಬಂಧಗಳು ವಿಶ್ವದಲ್ಲೇ ಅತ್ಯಂತ ಬಲಿಷ್ಠ ಮತ್ತು ಸ್ಥಿರವಾದವುಗಳಾಗಿವೆ. ರಕ್ಷಣಾ ಕ್ಷೇತ್ರದಲ್ಲಿ ಸಹಕಾರ, ಜಂಟಿ ಉತ್ಪಾದನೆ, ತಂತ್ರಜ್ಞಾನ ವರ್ಗಾವಣೆ ಸೇರಿದಂತೆ ‘ಮೇಕ್ ಇನ್ ಇಂಡಿಯಾ’ ಉದ್ದೇಶಗಳಿಗೆ ರಷ್ಯಾ ಸದಾ ಬೆಂಬಲ ನೀಡುತ್ತಿದೆ ಎಂದರು.
ಲಾವ್ರೊವ್ ಅವರು ಮಾತನಾಡಿ, ಭಾರತ-ರಷ್ಯಾ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಎಂದು ವರ್ಣಿಸಿದರು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪುಟಿನ್ ಅವರ ಭಾರತ ಭೇಟಿಗೆ ಸಿದ್ಧತೆಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
