ಜಟೆಯಲ್ಲಿ ಕಟ್ಟಿದ ನದಿಯ, ತಲೆಯಲ್ಲಿ ಮುಡಿದ ಶಶಿಯ, ಕಣ್ಣೊಳಗೆ ಉರಿವಾ ಬೆಂಕಿಯಾ, ಬಚ್ಚಿಟ್ಟುಕೊಂಡು ನಗುವಾ ನಮ್ಮ ಶಿವನಾ ಕಂಡೆಯಾ, ಅಮ್ಮಮ್ಮ ಅವನಾ ಮಹಿಮೆಯನು ನೀನೂ ಬಲ್ಲೆಯಾ…’ 1982ರಲ್ಲಿ ತೆರೆಕಂಡ ಚೆಲ್ಲಿದರಕ್ತ ಸಿನಿಮಾದ ಈ ಗೀತೆಯಲ್ಲಿ ಶಿವನ ಮಹಿಮೆಯನ್ನು ಹಾಡಿಹೊಗಳಿದ್ದಾರೆ. ಭಾರತದಲ್ಲಿ ಶಿವನಿಲ್ಲದ ಊರೇ ಇಲ್ಲ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಿರ್ಮಾಣಗೊಂಡಿರುವ ದೇವಾಲಯಗಳು ಒಂದಕ್ಕಿಂದ ಒಂದು ಮೀರಿಸಿದಂತಿವೆ. ಭಾರತದಲ್ಲಿ ಮಾತ್ರವಲ್ಲದೇ ಪಾಕಿಸ್ತಾನನದ ಪಂಜಾಬ್, ಆಸ್ಟ್ರೇಲಿಯಾದ ಮಿಂಟೋ, ನೇಪಾಳದ ಕಠ್ಮಂಡು, ಶ್ರೀಲಂಕಾದಲ್ಲಿಯೂ, ಮಾರಿಶಸ್ಗಳಲ್ಲು ಶಿವನ ಅದ್ಧೂರಿ ದೇವಾಲಗಳು ನೆಲೆಯೂರಿದ್ದು, ಇಂದಿಗೂ ಅವರು ಶಿವನ ಭಕ್ತಿಯನ್ನು ಜನರಿಗೆ ಸಾರುತ್ತಿವೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ನಿರ್ಮಾಣಗೊಂಡಿರುವ ಮುಕ್ತಿ ಗುಹೇಶ್ವರ ದೇವಾಲಯ ಜನಮನ ಸೆಳೆದಿದೆ.
ಸಿಡ್ನಿಯ ಹೊರವಲಯದಲ್ಲಿರುವ ಮಿಂಟೋ ಎಂಬ ನಗರದಲ್ಲಿ 1999ರಲ್ಲಿ ಈ ದೇವಾಲಯದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಸುಮಾರು 15 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಗುಹಾದೇವಾಲಯ ನಿರ್ಮಾಣಗೊಂಡಿದೆ. ಹೆಸರೇ ಹೇಳುವಂತೆ ಈ ದೇವಾಲಯ ಗುಹೆಯಲ್ಲಿ ಇದೆ. ಈ ಅಪೂರ್ವ ದೇವಾಲಯದ ನೆಲದ ಮೇಲೆ ಇರುವುದು ಗಣೇಶನ ಒಂದು ಗುಡಿ ಮಾತ್ರ. ಉಳಿದವು ಮೆಟ್ಟಿಲುಗಳನ್ನು ಇಳಿದು ಭೂಗತ ಶಿವದೇವಾಲಯಕ್ಕೆ ಹೋಗಬೇಕಾಗುತ್ತದೆ.
65,000 ಘನ ಮೀಟರ್ನಷ್ಟು ಮಣ್ಣನ್ನು ಕೊರೆದು, ನೆಲದಡಿಯಲ್ಲಿ ಗುಹೆಗಳನ್ನು ರೂಪಿಸಿ, ಅದರೊಳಗೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇಂದಿಗೂ ಜಗತ್ತಿನ ಏಕಮಾತ್ರ ಮಾನವ ನಿರ್ಮಿತ ಗುಹಾ ದೇವಾಲಯ ಎಂಬುದು ಇದರ ಖ್ಯಾತಿ.ಆಸ್ಟ್ರೇಲಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಶಿವದೇವಾಲಯದಲ್ಲಿ ಮಹಾಶಿವರಾತ್ರಿ, ಗಣೇಶ ಚತುರ್ಥಿ, ರಾಮನವಮಿ, ಶ್ರಾವಣಮಾಸದಂದು ಅದ್ಧೂರಿ ಪೂಜಾ ಕೈಂಕರ್ಯಗಳು ನೆರವೇರುತ್ತವೆ.
