ಮೊಹಾಲಿ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪಂಜಾಬಿ ಚಲನಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಜಸ್ವಿಂದರ್ ಭಲ್ಲಾ (65) ಅವರು ಶುಕ್ರವಾರ ಬೆಳಿಗ್ಗೆ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಆಗಸ್ಟ್ 23ರಂದು ಮೊಹಾಲಿಯಲ್ಲಿ ನಡೆಯಲಿದೆ.
1988ರಲ್ಲಿ ಚಾಚಾ ಛತ್ರ ಪಾತ್ರದ ಮೂಲಕ ದೂರದರ್ಶನಕ್ಕೆ ಪ್ರವೇಶಿಸಿದ ಭಲ್ಲಾ, 1989ರಲ್ಲಿ ಲುಧಿಯಾನಾದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇರಿದರೂ, ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಹಾಸ್ಯ ಅಭಿನಯದ ಮೂಲಕ ಜನಮನ ಗೆದ್ದಿದ್ದರು.
2020ರಲ್ಲಿ ಸರ್ಕಾರಿ ಉದ್ಯೋಗದಿಂದ ನಿವೃತ್ತರಾದ ನಂತರವೂ ಅವರು ಪಂಜಾಬಿ ಸಿನಿರಂಗದಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದರು.
‘ಜಟ್ ಅಂಡ್ ಜೂಲಿಯೆಟ್’, ‘ಕ್ಯಾರಿ ಆನ್ ಜಟ್ಟಾ’, ‘ಗೋಲಕ್ ಬುಗ್ನಿ ಬ್ಯಾಂಕ್ ತೆ ಬಟ್ವಾ’, ‘ಬದೈಯಾನ್ ಜಿ ಬದೈಯಾನ್’ ಸೇರಿದಂತೆ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಅವರ ಪಾತ್ರಗಳು ಜನಪ್ರಿಯತೆ ಪಡೆದಿದ್ದವು. ಅವರ ಕೊನೆಯ ಸಿನಿಮಾ 2024ರಲ್ಲಿ ಬಿಡುಗಡೆಯಾದ ‘ಶಿಂದಾ ಶಿಂದಾ ನೋ ಪಾಪಾ’ ಆಗಿತ್ತು.
ಜಸ್ವಿಂದರ್ ಭಲ್ಲಾ ಅವರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಸಂತಾಪ ವ್ಯಕ್ತಪಡಿಸಿ, “ಪಂಜಾಬಿ ಸಿನಿರಂಗದ ಒಂದು ಯುಗ ಅಂತ್ಯವಾಗಿದೆ” ಎಂದು ಹೇಳಿದ್ದಾರೆ. ನಟ ಗಿಪ್ಪಿ ಗ್ರೆವಾಲ್ ಸೇರಿದಂತೆ ಅನೇಕ ಕಲಾವಿದರು ಅವರ ಅಗಲಿಕೆಗೆ ದುಃಖ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
