ಬೆಂಗಳೂರು , 1 ನವೆಂಬರ್ (ಹಿ.ಸ):
ಆ್ಯಂಕರ್ :
ಸತತ ಸೋಲುಗಳಿಂದ ಕಂಗೆಟ್ಟಿದ್ದ ದುನಿಯಾ ವಿಜಯ್ ಅವರನ್ನು ಕೈಹಿಡಿದಿದ್ದು ‘ಸಲಗ’ ಸಿನಿಮಾ. ಅವರೇ ನಿರ್ದೇಶಿಸಿ, ನಟಿಸಿದ ‘ಸಲಗ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು. ಆ ಸಿನಿಮಾದ ಬಳಿಕ ಮತ್ತೆ ದುನಿಯಾ ವಿಜಯ್ರ ನಟನಾ ವೃತ್ತಿ ಟ್ರ್ಯಾಕ್ಗೆ ಬಂದಂತಿದೆ. ‘ಸಲಗ’ ಸಿನಿಮಾದ ಬಳಿಕ ದುನಿಯಾ ವಿಜಯ್ಗೆ ಪರಭಾಷೆ ಸಿನಿಮಾಗಳ ಅವಕಾಶಗಳೂ ಸಹ ಹೆಚ್ಚಾಗಿವೆ. ತೆಲುಗಿನಲ್ಲಿ ಬಾಲಕೃಷ್ಣ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ವಿಜಿ, ಇದೀಗ ತಮ್ಮ ಆರಾಧ್ಯ ದೈವ, ಅಚ್ಚುಮೆಚ್ಚಿನ ನಟನ ಎದುರು ವಿಲನ್ ಆಗಿ ನಟಿಸಲಿದ್ದಾರೆ.
ದುನಿಯಾ ವಿಜಯ್ಗೆ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಎಂದರೆ ಅಚ್ಚುಮೆಚ್ಚು. ತಾವು ರಜನೀಕಾಂತ್ ಫ್ಯಾನ್ ಎಂಬುದನ್ನು ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಅವರ ಎದುರೇ ವಿಲನ್ ಆಗಿ ನಟಿಸುವ ಅವಕಾಶ ದುನಿಯಾ ವಿಜಯ್ರನ್ನು ಅರಸಿ ಬಂದಿದೆ ಎನ್ನಲಾಗುತ್ತಿದೆ.
ರಜನೀಕಾಂತ್ರ ಹೊಸ ಸಿನಿಮಾವನ್ನು ತಮಿಳಿನ ಯಶಸ್ವೀ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್. ಈಗಾಗಲೇ ಲೋಕೇಶ್ ಕನಗರಾಜ್ ದುನಿಯಾ ವಿಜಯ್ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
