ಬೆಂಗಳೂರು, 21 ಜನವರಿ(ಹಿ.ಸ):
ಆ್ಯಂಕರ್ :
ನಟ, ರಾಜಕಾರಣಿ ನಿಖಿಲ್ ಕುಮಾರ್ ಅವರು ಅಭಿಮಾನಿಗಳಿಗೆ ಒಂದು ಮುಖ್ಯವಾದ ಸಂದೇಶ ನೀಡಿದ್ದಾರೆ. ಜನವರಿ 22ರಂದು ಅವರ ಜನ್ಮದಿನ. ಆದರೆ ಈ ಬಾರಿ ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅದರಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿ ಆಗಲಿದ್ದಾರೆ. ಆ ಕಾರಣದಿಂದ ಅವರು ಈ ವರ್ಷ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರನ್ನು ಹುಟ್ಟುಹಬ್ಬದ ದಿನ ಭೇಟಿಯಾಗುತ್ತಿಲ್ಲ. ಈ ಬಗ್ಗೆ ಮುಂಚಿತವಾಗಿ ಅವರು ಎಲ್ಲರಿಗೂ ಮಾಹಿತಿ ನೀಡಿದ್ದಾರೆ.
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಆ ಐತಿಹಾಸಿಕ ಕ್ಷಣವನ್ನು ನೇರವಾಗಿ ವೀಕ್ಷಿಸುವ ಅವಕಾಶ ಕೆಲವರಿಗೆ ಸಿಗುತ್ತಿದೆ. ಕರ್ನಾಟಕದ ಕೆಲವು ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು ಮುಂತಾದವರಿಗೆ ಆಹ್ವಾನ ಬಂದಿದೆ. ಅದೇ ರೀತಿ, ನಿಖಿಲ್ ಕುಮಾರ್ ಅವರು ಕೂಡ ಅಯೋಧ್ಯೆಗೆ ತೆರಳಲು ಸಜ್ಜಾಗಿದ್ದಾರೆ.
‘ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಜನವರಿ 22, ನನ್ನ ಹುಟ್ಟುಹಬ್ಬದ ದಿನ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯಲ್ಲಿ ನಾನು ಭಾಗಿಯಾಗಬೇಕಿದೆ. ನೀವೆಲ್ಲರೂ ನೀವಿದ್ದ ಕಡೆಯಿಂದಲೇ ನನ್ನ ಹುಟ್ಟುಹಬ್ಬಕ್ಕೆ ಹರಿಸಿದರೆ ಅದೇ ನನಗೆ ಸಂತೋಷ’ ಎಂದು ನಿಖಿಲ್ ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ‘ನನ್ನ ಹುಟ್ಟುಹಬ್ಬಕ್ಕಾಗಿ ಯಾವುದೇ ದುಂದು ವೆಚ್ಚ ಬೇಡ. ಅದನ್ನೇ ಒಳ್ಳೆಯ ಕಾರ್ಯಕ್ಕೆ ಬಳಸಿ. ಮತ್ತೊಮ್ಮೆ ನಿಮ್ಮ ಬಳಿ ಕ್ಷಮೆ ಕೇಳುತ್ತ, ಆದಷ್ಟು ಬೇಗ ಭೇಟಿ ಆಗೋಣ ಎಂದು ತಿಳಿಸುತ್ತೇನೆ. ನಿಮ್ಮ ಪ್ರೀತಿಯ ನಿಖಿಲ್ ಕುಮಾರ್’ ಎಂದು ಅವರು ಪತ್ರ ಪೂರ್ಣಗೊಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
