ಬೆಂಗಳೂರು, 3 ಫೆಬ್ರವರಿ (ಹಿ.ಸ):
ಆ್ಯಂಕರ್ :
ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮತ್ತು ಡ್ರಗ್ ಪೆಡ್ಲರ್ಗಳ ಹಾವಳಿ ಹೆಚ್ಚಾಗಿದೆ. ಇದನ್ನು ಶಮನಗೊಳಿಸಲು ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಟೊಂಕ ಕಟ್ಟಿ ನಿಂತಿದ್ದಾರೆ. ಇಷ್ಟು ದಿನಗಳ ಕಾಲ ಡ್ರಗ್ ಪೆಡ್ಲರ್ಗಳು ವಿದೇಶದಿಂದ ಮಾದಕ ವಸ್ತು ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಡ್ರಗ್ಸ್ ಭಾರತೀಯ ಅಂಚೆ ಮೂಲಕವೇ ನಗರಕ್ಕೆ ಬರುತ್ತಿದೆ. ಹೌದು ಹೊರ ರಾಜ್ಯಗಳಿಂದ ಅಂಚೆ ಮೂಲಕ ಮೂಲಕ ನಗರಕ್ಕೆ ಮಾದಕವಸ್ತು ಆಮದಾಗಿದ್ದು, ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಡ್ರಗ್ಸ್ ಬಂದ ಪಾರ್ಸಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಅಂಚೆ ಮೂಲಕ ಡ್ರಗ್ಸ್ ಬಂದ ವಿಚಾರವನ್ನು ತಿಳಿದ ಸಿಸಿಬಿ ಪೊಲೀಸರು ಕೂಡಲೆ ಫಿಲ್ಡ್ಗೆ ಇಳಿದಿದ್ದಾರೆ. ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲಕ ನಗರಕ್ಕೆ ಬಂದಿದೆ. ಈ ಗಿಫ್ಟ್ ಬಾಕ್ಸ್ ಅನ್ನು ಜಾರ್ಖಂಡ್ ಮೂಲದ ರಿತಿಕ್ ರಾಜ್ ಎಂಬುವನು ಪಡೆಯುತ್ತಿದ್ದಾಗ, ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಂತರ ಸಿಸಿಬಿ ಪೊಲೀಸರು ಆರೋಪಿಯಿಂದಲೇ ಬಾಕ್ಸ್ ಓಪನ್ ಮಾಡಿಸಿದ್ದಾರೆ. ಬಾಕ್ಸ್ ಓಪನ್ ಮಾಡಿದಾಗ ಚರಸ್ ಇರುವುದು ಪತ್ತೆಯಾಗಿದೆ.
ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ. ಕೇರಳ ಮೂಲದ ಆರೋಪಿ ಅದಿತ್ ಸರ್ವೋತ್ತಮ್ ರಿಷಿಕೇಷದಿಂದ ಅಂಚೆ ಮೂಲಕ ಚರಸ್ ಕಳುಸಿದ್ದನು. ಇತ್ತ ರಿತಿಕ್ ರಾಜ್ ಅರೆಸ್ಟ್ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಅದಿತ್ ಸರ್ವೋತ್ತಮ್ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
