ದೆಹಲಿ, 10 ಜನವರಿ(ಹಿ.ಸ):
ಆ್ಯಂಕರ್ :ಮಾಲ್ಡೀವ್ಸ್ ವಿವಾದದ ಮಧ್ಯೆ ಲಕ್ಷದ್ವೀಪದ ಬಗ್ಗೆ ಅಂತಾರಾಷ್ಟ್ರೀಯ ಗಮನ ನೆಟ್ಟಿದ್ದು, ಜೊತೆ ಜೊತೆಗೆ ಅಲ್ಲಿನ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ನಕಾರಾತ್ಮಕ ಧ್ವನಿಗಳೂ ಸೇರಿವೆ. ಇದಕ್ಕೆ ಉತ್ತರವೋ ಎಂಬಂತೆ ಲಕ್ಷದ್ವೀಪದಲ್ಲಿ ವಿಶ್ವದರ್ಜೆಯ ಹೋಟೆಲ್, ರೆಸಾರ್ಟ್ಗಳು ನಿರ್ಮಾಣವಾಗುತ್ತಿರುವ ಸುದ್ದಿ ಬಂದಿದೆ. ಟಾಟಾ ಗ್ರೂಪ್ ಸಂಸ್ಥೆ ಲಕ್ಷದ್ವೀಪದ ಸುಹೇಲಿ ಮತ್ತು ಕಡಮತ್ ದ್ವೀಪಗಳಲ್ಲಿ ಎರಡು ರೆಸಾರ್ಟ್ ನಿರ್ಮಿಸುತ್ತಿದೆ. ಇವು 2026ಕ್ಕೆ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಲಕ್ಷದ್ವೀಪದಲ್ಲಿ ಟಾಟಾ ಸಂಸ್ಥೆಯಿಂದ ರೆಸಾರ್ಟ್ಗಳ ನಿರ್ಮಾಣ ಮಾಡುವ ನಿರ್ಧಾರ ದಿಢೀರ್ ಕೈಗೊಂಡಿದ್ದಲ್ಲ. 2023ರ ಜನವರಿ ತಿಂಗಳಲ್ಲೇ ಟಾಟಾ ಗ್ರೂಪ್ ಸಂಸ್ಥೆ ಲಕ್ಷದ್ವೀಪದಲ್ಲಿ ಗ್ರೀನ್ಫೀಲ್ಡ್ ಪ್ರಾಜೆಕ್ಟ್ ಆರಂಭಿಸುವುದಾಗಿ ಘೋಷಿಸಿತ್ತು. ಟಾಟಾ ಸನ್ಸ್ಗೆ ಸೇರಿದ ಐಎಚ್ಸಿಎಲ್ ಸಂಸ್ಥೆ ಗ್ರೀನ್ಫೀಲ್ಡ್ ಪ್ರಾಜೆಕ್ಟ್ ಅಡಿಯಲ್ಲಿ ತಾಜ್ ಬ್ರ್ಯಾಂಡ್ನ ಎರಡು ರೆಸಾರ್ಟ್ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಈಗ ಲಕ್ಷದ್ವೀಪದ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ಪ್ರಶ್ನೆಗಳು ಉದ್ಭವವಾದ ಹಿನ್ನೆಲೆಯಲ್ಲಿ ಟಾಟಾದ ತಾಜ್ ಬ್ರ್ಯಾಂಡ್ ಹೋಟೆಲ್ಗಳ ಸಂಗತಿ ಮುನ್ನೆಲೆಗೆ ಬಂದಿದೆ.
‘ಲಕ್ಷದ್ವೀಪದಲ್ಲಿ ಬಹಳ ರಮ್ಯವೆನಿಸುವ ಬೀಚ್ಗಳು ಮತ್ತು ಹವಳ ಬಂಡೆಗಳು ಕಣ್ಮನ ಸೆಳೆಯುತ್ತವೆ. ಎರಡು ವಿಶ್ವದರ್ಜೆ ತಾಜ್ ರೆಸಾರ್ಟ್ಗಳು ದೇಶೀಯ ಮತ್ತು ವಿದೇಶೀ ಪ್ರವಾಸಿಗರನ್ನು ಸೆಳೆಯುತ್ತವೆ’ ಎಂದು ಯೋಜನೆ ಘೋಷಿಸುವ ವೇಳೆಯೆ ಐಎಚ್ಸಿಎಲ್ ಎಂಡಿ ಮತ್ತು ಸಿಇಒ ಪುನೀತ್ ಛಾತವಾಲ್ ಹೇಳಿದ್ದರು.
ಸುಹೇಲಿಯಲ್ಲಿರುವ ತಾಜ್ ರೆಸಾರ್ಟ್ ಬೀಚ್ ಬಳಿಯೇ ಇರುತ್ತದೆ. ಇದರಲ್ಲಿ 60 ವಿಲ್ಲಾ ಮತ್ತು 50 ವಾಟರ್ ವಿಲ್ಲಾ ಸೇರಿದಂತೆ 110 ಲಕ್ಷುರಿ ರೂಮುಗಳು ಇರುತ್ತವೆ.
ಹಿಂದೂಸ್ತಾನ್ ಸಮಾಚಾರ್
