
ದೆಹಲಿ, 16 ಡಿಸೆಂಬರ್(ಹಿ.ಸ):
ಆ್ಯಂಕರ್ :
ಭಾರತದಲ್ಲಿ ಇವಿ ಫ್ಯಾಕ್ಟರಿ ತೆರೆಯುವವರೆಗೂ ಕಾರುಗಳ ಆಮದಿಗೆ ತೆರಿಗೆ ವಿನಾಯಿತಿ ಕೊಡಬೇಕೆಂದು ಇಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆ ಮಾಡಿರುವ ಮನವಿಯನ್ನು ಸರ್ಕಾರ ಪುರಸ್ಕರಿಸುವ ಸಾಧ್ಯತೆ ಇಲ್ಲ. ಭಾರತಕ್ಕೆ ಯಾವುದೇ ಎಲೆಕ್ಟ್ರಿಕ್ ವಾಹನಗಳ ಆಮದು ಮಾಡಿಕೊಳ್ಳಲು ಸಬ್ಸಿಡಿ ನೀಡುವ, ತೆರಿಗೆ ವಿನಾಯಿತಿ ನೀಡುವ ಯಾವ ಪ್ರಸ್ತಾಪವೂ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಟೆಸ್ಲಾ ಅಥವಾ ಬೇರೆ ಯಾವುದಾರೂ ವಿದೇಶೀ ಕಾರು ತಯಾರಕ ಸಂಸ್ಥೆಗೆ ವಿಶೇಷ ವಿನಾಯಿತಿ ನೀಡಲಾಗಿದೆಯಾ ಎಂಬ ಪ್ರಶ್ನೆಗೆ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ತಿಳಿಸಿದ್ದಾರೆ.
ಕಾರು ಆಮದು ಮತ್ತು ಕಾರು ತಯಾರಕಾ ಘಟಕ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಮಧ್ಯೆ ಸಾಕಷ್ಟು ಬಾರಿ ಮಾತುಕತೆಗಳು ನಡೆದಿವೆ. ಆದರೆ ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ. ಭಾರತ ಸದ್ಯ ಆಮದಿತ ಕಾರುಗಳ ಮೇಲೆ ಶೇ. 60ರಿಂದ 125ರಷ್ಟು ಇಂಪೋರ್ಟ್ ಡ್ಯೂಟಿ ಹೇರುತ್ತದೆ. 40,000 ಡಾಲರ್ಗಿಂತ (ಸುಮಾರು 34 ಲಕ್ಷ ರೂ) ಕಡಿಮೆ ಬೆಲೆಯ ಕಾರಿನ ಆಮದಿಗೆ ಶೇ. 60ರಷ್ಟು ಆಮದು ಸುಂಕ ಇದೆ. 40,000 ಡಾಲರ್ಗಿಂತ ಹೆಚ್ಚಿನ ಬೆಲೆಯ ಕಾರಿನ ಆಮದಿಗೆ ಶೇ. 100ರಷ್ಟು ಸುಂಕ ಹಾಕಲಾಗುತ್ತದೆ. ಅಂದರೆ 35 ಲಕ್ಷ ರೂ ಬೆಲೆಯ ಕಾರನ್ನು ಭಾರತಕ್ಕೆ ತಂದರೆ ಅದರ ಬೆಲೆ 70 ಲಕ್ಷ ರೂ ಆಗುತ್ತದೆ. ಇನ್ನು, ಬಳಸಿದ ಕಾರು (ಯೂಸ್ಡ್ ಕಾರು) ಆಮದುಗೊಂಡರೆ ಅದಕ್ಕೆ ಶೇ. 125ರಷ್ಟು ಆಮದು ಸುಂಕ ಇರುತ್ತದೆ.
ಹಿಂದೂಸ್ತಾನ್ ಸಮಾಚಾರ್
