ನವದೆಹಲಿ, 23 ಮಾರ್ಚ್
ಆ್ಯಂಕರ್:ಷೇರುಮಾರುಕಟ್ಟೆಗೆ ವಾರಾಂತ್ಯವಾದ ಇಂದು ಭಾರತೀಯ ಐಟಿ ಕಂಪನಿಗಳ ಷೇರುಗಳಿಗೆ ಹಿನ್ನಡೆ ಆಗುತ್ತಿದೆ. ನಿಫ್ಟಿ ಐಟಿ ಇಂಡೆಕ್ಸ್ ಶೇ. 3ರಷ್ಟು ಕುಸಿತ ಕಂಡಿದೆ. ಪ್ರಮುಖ ಸೂಚ್ಯಂಕಗಳಾದ ನಿಫ್ಟಿ50, ಸೆನ್ಸೆಕ್ಸ್ 30 ಮೊದಲಾದವು ಕೂಡ ಕಡಿಮೆ ಆಗಿವೆ. ಇದಕ್ಕೂ ಮುನ್ನ, ಅತ್ತ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಜಾಗತಿಕ ಐಟಿ ದೈತ್ಯ ಅಕ್ಸೆಂಚರ್ನ ಷೇರು ಬೆಲೆ ಇಳಿಕೆ ಆಗಿತ್ತು. ಅದರ ಬೆನ್ನಲ್ಲೇ ಅಮೆರಿಕದಲ್ಲಿರುವ ಭಾರತೀಯ ಕಂಪನಿಗಳ ಎಡಿಆರ್ ಷೇರುಗಳೂ ಕೂಡ ಮೌಲ್ಯ ನಷ್ಟ ಅನುಭವಿಸಿದವು.
ಅಕ್ಸೆಂಚರ್ ನ ಆದಾಯದ ಬಗ್ಗೆ ನಿರಾಸೆ
ಐರ್ಲೆಂಡ್ ಮೂಲದ ಅಕ್ಸೆಂಚರ್ ವಿಶ್ವದ ಅತಿದೊಡ್ಡ ಐಟಿ ಸರ್ವಿಸ್ ಕಂಪನಿಗಳಲ್ಲಿ ಒಂದು. 2024ರ ವರ್ಷಕ್ಕೆ ತನ್ನ ಆದಾಯದ ಬಗ್ಗೆ ಇದ್ದ ನಿರೀಕ್ಷೆಯನ್ನು ಕಡಿಮೆ ಮಾಡಿದೆ. ಶೇ. 3ರಿಂದ 5ರಷ್ಟು ಇದ್ದ ಆದಾಯದ ನಿರೀಕ್ಷೆ ಶೇ. 1ಕ್ಕೆ ಇಳಿದಿದೆ. ಹೀಗಾಗಿ, ಅಮೆರಿಕದ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಅಕ್ಸೆಂಚರ್ನ ಷೇರುಬೆಲೆ ಕಡಿಮೆ ಆಗಿದೆ.
ಅಕ್ಸೆಂಚರ್ ಆದಾಯ ಕಡಿಮೆಗೊಂಡರೆ ಮತ್ತು ಷೇರುಬೆಲೆ ಕಡಿಮೆಗೊಂಡರೆ ಭಾರತದ ಐಟಿ ಕಂಪನಿಗಳ ಮೇಲೆ ಸಹಜವಾಗಿಯೇ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಕ್ಸೆಂಚರ್ ಪ್ರಮುಖ ಐಟಿ ಕಂಪನಿಯಾಗಿದ್ದು, ಅದಕ್ಕೆ ಹಿನ್ನಡೆ ಎಂದರೆ ಒಟ್ಟಾರೆ ಐಟಿ ಕ್ಷೇತ್ರಕ್ಕೆ ಹಿನ್ನಡೆ ಎಂದು ತೋರಬಹುದು. ಈ ಕಾರಣಕ್ಕೆ ಒಟ್ಟಾರೆಯಾಗಿ ಐಟಿ ಸರ್ವಿಸ್ ಉದ್ಯಮದ ಬಗ್ಗೆ ಹೂಡಿಕೆದಾರರಿಗೆ ಅನುಮಾನ ಸುಳಿದಿದೆ. ಇದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಐಟಿ ಷೇರುಗಳಿಗೆ ಹಿನ್ನಡೆ ತಂದಿದೆ.
