ನವದೆಹಲಿ,14ನವೆಂಬರ್ (ಹಿ.ಸ):
ಆ್ಯಂಕರ್ :
೨೦೨೭ರ ವೇಳೆಗೆ ದೇಶದಲ್ಲಿ ೧ ಸಾವಿರದ ೪೦೪ ಮಿಲಿಯನ್ ಟನ್, ೨೦೩೦ರ ವೇಳೆಗೆ ೧ ಸಾವಿರದ ೫೭೭ ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಲು ಕಲ್ಲಿದ್ದಲು ಸಚಿವಾಲಯ ಯೋಜಿಸಿದೆ.
ಪ್ರಸ್ತುತ ದೇಶದಲ್ಲಿ ವಾರ್ಷಿಕ ೧ ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಲಾಗುತ್ತಿದೆ. ಪ್ರಸಕ್ತ ವರ್ಷ ದೇಶೀಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ಸುಮಾರು ೮೨೧ ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
೨೦೩೦ರ ವೇಳೆಗೆ ಹೆಚ್ಚುವರಿ ೮೦ ಗಿಗಾ ವ್ಯಾಟ್ ಥರ್ಮಲ್ ಸಾಮರ್ಥ್ಯಕ್ಕೆ ಅಗತ್ಯವಿರುವ ಕಲ್ಲಿದ್ದಲು ಪೂರೈಸುವ ಅಗತ್ಯವನ್ನು ಸಚಿವಾಲಯ ಮನಗಂಡಿದೆ. ತನ್ನ ಉತ್ಪಾದನಾ ವರ್ಧನೆ ಯೋಜನೆಯಡಿ ಹೆಚ್ಚುವರಿ ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದಿಸುವ ಕಾರ್ಯಕ್ರಮ ಹೊಂದಿದ್ದು, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಕಲ್ಲಿದ್ದಲು ಲಭ್ಯತೆಯನ್ನು ಖಾತರಿಪಡಿಸುತ್ತದೆ ಎಂದು ತಿಳಿಸಿದೆ.
ಹೊಸ ಕಲ್ಲಿದ್ದಲು ಗಣಿಗಳನ್ನು ತೆರೆಯುವುದು, ಗಣಿಗಳ ಸಾಮರ್ಥ್ಯ ವಿಸ್ತರಣೆ ಹಾಗೂ ವಾಣಿಜ್ಯ ಗಣಿಗಳಿಂದ ಉತ್ಪಾದನೆ ಹೆಚ್ಚಳ ಸೇರಿದಂತೆ ಹಲವು ಉಪಕ್ರಮಗಳನ್ನು ಹೊಸ ಯೋಜನೆ ಒಳಗೊಂಡಿರುತ್ತದೆ. ೨೦೨೭ ಹಾಗೂ ೨೦೩೦ರ ಉತ್ಪಾದನಾ ಯೋಜನೆಗಳು ದೇಶದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಸಂಭವನೀಯ ಅಗತ್ಯವನ್ನು ಮೀರುತ್ತದೆ ಎಂದು ಸಚಿವಾಲಯ ಆಶಯ ವ್ಯಕ್ತಪಡಿಸಿದೆ.
ಕಲ್ಲಿದ್ದಲು, ಇಂಧನ ಹಾಗೂ ರೈಲ್ವೆ ಸಚಿವಾಲಯಗಳು ಸಮನ್ವಯದಿಂದ ಕೆಲಸ ಮಾಡುತ್ತಿದ್ದು, ಈ ಮೂಲಕ ದೇಶದಲ್ಲಿ ಸುಗಮ ಕಲ್ಲಿದ್ದಲು ಪೂರೈಕೆ ನಿರ್ವಹಿಸಲಾಗುತ್ತಿದೆ. ಕಳೆದ ೩ ತಿಂಗಳ ಅವಧಿಯಲ್ಲಿ ಉಷ್ಣ ವಿದ್ಯುತ್ ಬೇಡಿಕೆಯು ಕಳೆದ ವರ್ಷಕ್ಕಿಂತ ಶೇಕಡ ೨೦ರಷ್ಟು ಹೆಚ್ಚಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್
