

ಹೊಸಪೇಟೆ, 18 ಅಕ್ಟೋಬರ್ :
ಆ್ಯಂಕರ್ : ಕರ್ನಾಟಕ ಸಂಭ್ರಮ 50ರ ಆಚರಣೆಯು ರಾಜ್ಯದ್ಯಾಂತ ವರ್ಷವಿಡೀ ಸಂಭ್ರಮಾಚರಣೆ ಮಾಡಬೇಕೆಂದು ಸರ್ಕಾರ ನಿರ್ಧರಿಸಿದ್ದು, ಸರ್ಕಾರÀ ಕಾರ್ಯಕ್ರಮದ ಜೊತೆಗೆ ಜನರ ಕಾರ್ಯಕ್ರಮವಾಗಿ ಆಚರಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸಂಭ್ರಮ 50ರ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದು ಒಂದು ವರ್ಷದ ಕಾರ್ಯಕ್ರಮವಾಗಿದ್ದು, ಯಾವುದೇ ನಿರ್ಲಕ್ಷ್ಯ ವಹಿಸದೆ ಕಾರ್ಯಕ್ರಮವನ್ನು ಯಶ್ವಸಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
1973 ರ ಇತಿಹಾಸವನ್ನೇ ಹಂಪಿಯಲ್ಲಿ ಮತ್ತೊಮ್ಮೆ ಮರು ಕಳಿಸುವಂತೆ ಆಗಬೇಕು ಎಂದರು. 1973 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದರು. ನ.1 ಕ್ಕೆ ಇದು 50 ವರ್ಷವಾಗುತ್ತಿದೆ, ಹಾಗಾಗಿ ಮುಖ್ಯಮಂತ್ರಿ ಅವರು ಈ ಕಾರ್ಯಕ್ರಮವನ್ನು ಇಡೀ ರಾಜ್ಯದ್ಯಾಂತ ಒಂದು ವರ್ಷದ ಕಾರ್ಯಕ್ರಮವನ್ನಾಗಿ ಆಚರಿಸಬೇಕು. ಹೆಸರು ಆಗಲಿ ಕರ್ನಾಟಕ, ಉಸಿರು ಆಗಲಿ ಕನ್ನಡ ಎಂಬ ಧ್ಯೇಯ ವ್ಯಾಕ್ಯದೊಂದಿಗೆ ಆಚರಿಸಲು ನಿರ್ಧಾರಿಸಲಾಗಿದೆ ಎಂದರು.
ಈ ನಿಟ್ಟಿನಲ್ಲಿ ಸಾಹಿತಿಗಳು, ಹೋರಾಟಗಾರರ ಹಾಗೂ ಕಲಾವಿದರ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ ಎಂದ ಅವರು ನವೆಂಬರ್ 2 ರಂದು ಹಂಪಿಯಲ್ಲಿ ಸಂಜೆ ಮುಖ್ಯಮಂತ್ರಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕರ್ನಾಟಕ ಜ್ಯೋತಿಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಜ್ಯೋತಿಯು ಸಂಚಾರಿಸಿ ಕೊಪ್ಪಳ ಮೂಲಕ ನ.3ರಂದು ಗದಗ ತಲುಪಲಿದ್ದು ಕರ್ನಾಟಕ ಜ್ಯೋತಿಗೆ ಸಂಚರಿಸುವ ಮಾರ್ಗದಲ್ಲಿ ಸೂಕ್ತ ಭದ್ರತೆಯನ್ನು ಒದಗಿಸಲು ಸೂಚಿಸಿದರು.
ವಸತಿ, ಹಜ್ ಮತ್ತು ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ಮಾತನಾಡಿ ಕರ್ನಾಟಕ ರಾಜ್ಯ ಎಂಬ ಹೆಸರನ್ನು ಮರುನಾಮಕರಣ ಮಾಡಿ ನ.1 ಕ್ಕೆ 50 ವರ್ಷಗಳು ತುಂಬಲಿದೆ. ಈ ಹಿನ್ನಲೆಯಲ್ಲಿ ಈ ವರ್ಷ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮವನ್ನು ಯಶ್ವಸಿಯಾಗಿ ನೆರವೇರಿಸಲು ಸಮಿತಿಯನ್ನು ರಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಎಲ್ಲಾರೂ ನಮ್ಮ ಕಾರ್ಯಕ್ರಮ ಕರ್ನಾಟಕ ಕಾರ್ಯಕ್ರಮವಂತೆ ಆಚರಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ, ಕಂಪ್ಲಿ ಶಾಸಕರಾದ ಗಣೇಶ, ಜಿಲ್ಲಾಧಿಕಾರಿ ದಿವಾಕರ ಎಂ.ಎಸ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
