ಕೊಪ್ಪಳ, 17 ಅಕ್ಟೋಬರ್ (ಹಿ.ಸ):
ಆ್ಯಂಕರ್: ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಪ್ರಮುಖ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಅರ್ಹ ಪದವೀಧರರು ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೋಂದಾಯಿಸುವಲ್ಲಿ ನಿರೀಕ್ಷಿತ ಬೆಳವಣಿಗೆ ಕಂಡು ಬಂದಿರುವುದಿಲ್ಲ. ಆದ್ದರಿಂದ ಪುನಃ ಈ ಪತ್ರಿಕಾ ಪ್ರಕಟಣೆ ಮುಖಾಂತರ ಈ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸುಭದ್ರ ಹಾಗೂ ಜನಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಎಲ್ಲಾ ಅರ್ಹ ಮತದಾರರಲ್ಲಿ ಕೋರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅರ್ಹತಾ ದಿನಾಂಕ 01.11.2023ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020ಕ್ಕಿಂತ ಮುಂಚೆ ಭಾರತದ ಯಾವುದೇ ವಿಶ್ವವಿದ್ಯಾಲಯದಿಂದ ಪದವೀಧರರಾಗಿರತಕ್ಕದ್ದು ಅಥವಾ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1950ರ ಪ್ರಕರಣ 27 ಉಪಪ್ರಕರಣ 3(ಎ)ರನ್ವಯ ಭಾರತ ಚುನಾವಣಾ ಆಯೋಗದ ಸಹಮತದೊಂದಿಗೆ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಪದವಿಗೆ ತತ್ಸಮಾನವೆಂದು ನಿರ್ದಿಷ್ಟಪಡಿಸಿದ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.
ದಿನಾಂಕ 01.11.2020ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ 18 ರಲ್ಲಿ (ಭಾವಚಿತ್ರದೊಂದಿಗೆ) ಭರ್ತಿ ಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳನ್ನು ಸ್ವಯಂಧೃಡೀಕರಿಸಿ ಅಲ್ಲದೇ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ದಿನಾಂಕ 06.11.2023 ರೊಳಗಾಗಿ ಮತದಾರರ ನೋಂದಣಾಧಿಕಾರಿಗಳು/ ಸಹಾಯಕ ಮತದಾರರ ನೋಂದಣಾಧಿಕಾರಿಗಳು/ ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಸೀಲ ಕಾರ್ಯಾಲಯದಲ್ಲಿ) ಸಲ್ಲಿಸಬಹುದು.
ಸೇವೆಯಲ್ಲಿರುವ ಸರ್ಕಾರಿ ನೌಕರರು ತಮ್ಮ ಇಲಾಖಾ ಮುಖ್ಯಸ್ಥರ ಮೂಲಕ ಇಲಾಖಾ ಮುಖ್ಯಸ್ಥರು ತಮ್ಮ ಅಧೀನದಲ್ಲಿ ಬರುವ ಸರ್ಕಾರಿ ನೌಕರರ ಸೇವಾ ದಾಖಲೆಗಳನ್ನು ಪರಿಶೀಲಿಸಿ, ಆಯೋಗವು ನಿಗದಿಪಡಿಸಿರುವ 3ನೇ ಅನುಸೂಚಿತ ನಮೂನೆಯಲ್ಲಿ ದೃಢೀಕರಣ ಪತ್ರವನ್ನು ನೀಡಿ ತಮ್ಮ ಕಚೇರಿಯ ಎಲ್ಲಾ ಅರ್ಹ ಸಿಬ್ಬಂಗಳ ಅರ್ಜಿಗಳನ್ನು ಒಟ್ಟಾಗಿ ಗೊತ್ತುಪಡಿಸಿದ ಅಧಿಕಾರಿಗೆ ದಿನಾಂಕ 06.11.2023ರ ಒಳಗಾಗಿ ನೀಡಬಹುದು.
ಪ್ರಮಾಣ ಪತ್ರದೊಡನೆ ಅರ್ಜಿದಾರರು ತಾವು ಓದಿದ ಕಾಲೇಜಿನ ಪ್ರಾಂಶುಪಾಲರು ಅಥವಾ ಸಂಬಂಧಪಟ್ಟ ವಿಶ್ವವಿದ್ಯಾಲಯದ ರಿಜಿಸ್ಟ್ರಾರಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬಹುದು. ಫಾರಂ-18ರ ಅರ್ಜಿಗಳನ್ನು ತಹಶೀಲ್ದಾರ ಕಾರ್ಯಾಲಯದಿಂದ ಪಡೆಯಬಹುದು ಅಥವಾhttps://ceo.karnataka. gov.in/342/forms/kn ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಅರ್ಹ ಪದವೀಧರರು ಸಂಬಂಧಪಟ್ಟ ಅಧಿಕಾರಿಗಳಿಗೆ ಚುನಾವಣಾ ಗುರುತಿನ ಚೀಟಿಯ ಎಪಿಕ್ ನಂಬರ್ ಮಾಹಿತಿಯನ್ನುಒದಗಿಸತಕ್ಕದ್ದು.
ಕರ್ನಾಟಕ ಈಶಾನ್ಯ ಪದವೀಧರರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆÀಗಳು ಇದ್ದಲ್ಲಿ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಸೀಲ ಕಾರ್ಯಾಲಯದಲ್ಲಿ) ನಿಗದಿಪಡಿಸಿದ ಕಾಲಮಿತಿಯೊಳಗೆ ಸಲ್ಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಅರ್ಹತಾ ದಿನಾಂಕ 01.11.2023ಕ್ಕೆ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯು ನೂತನವಾಗಿ ಸಿದ್ದಪಡಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. ಭಾರತ ಚುನಾವಣಾ ಆಯೋಗವು ದಿನಾಂಕ 09.08.2023ರ ಪತ್ರದನ್ವಯ ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯು ಹೊಸದಾಗಿ ಸಿದ್ಧಪಡಿಸಲಾಗುತ್ತಿರುವುದರಿಂದ ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ 18 ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆಂದು ನಿರ್ದೇಶನ ನೀಡಿರುತ್ತಾರೆ. ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುವ ಕುರಿತು ವೇಳಾಪಟ್ಟಿಯನ್ನು ಈಗಾಗಲೇ ದಿನಾಂಕ 30.09.2023ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ. ಭಾರತ ಚುನಾವಣಾ ಆಯೋಗವು ಹೊರಡಿಸಿದ ಪತ್ರದನ್ವಯ ಪದವೀಧರ ಮತದಾರರ ನೋಂದಣಿಗಾಗಿ ನೀಡಿದ ನಿರ್ದೇಶನಗಳನ್ವಯ ಅರ್ಹರಿರುವ ಎಲ್ಲಾ ಪದವೀಧರರು ಅಗತ್ಯ ದಾಖಲಾತಿಗಳೊಂದಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ತಿಳಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ತಿಳಿಸಿದೆ
