
ಬೆಂಗಳೂರು,17 ಅಕ್ಟೋಬರ್ (ಹಿ.ಸ):
ಆ್ಯಂಕರ್ :
ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವ ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಮಾರುಕಟ್ಟೆ ದೃಷ್ಟಿಯಿಂದ ಸದೃಢವಾಗಿ ಪ್ರತಿಷ್ಠಾಪಿಸುವ ಗುರಿಯೊಂದಿಗೆ ಕೈಗಾರಿಕಾ ಇಲಾಖೆಯು ಖ್ಯಾತ ಉದ್ಯಮಿ ಸಜ್ಜನ್ ಜಿಂದಾಲ್ ನೇತೃತ್ವದಲ್ಲಿ ‘ಇನ್ವೆಸ್ಟ್ ಕರ್ನಾಟಕ ಫೋರಂ’ (ಐಕೆಎಫ್) ಅನ್ನು ಪುನಾರಚಿಸಿದೆ.
ಐಕೆಎಫ್ ಪುನಾರಚನೆಗೆ ಸಂಬಂಧಿಸಿದಂತೆ ಅ.13ರಂದು ಆದೇಶ ಹೊರಡಿಸಲಾಗಿದೆ. ಜಿಂದಾಲ್ ಸ್ಟೀಲ್ ವರ್ಕ್ಸ್ ಉದ್ಯಮದ ಮಾಲೀಕರಾಗಿರುವ ಸಜ್ಜನ್ ಜಿಂದಾಲ್ ಅವರನ್ನು ಉಕ್ಕು ವಲಯದಿಂದ ಆಯ್ಕೆ ಮಾಡಲಾಗಿದ್ದು, ಇವರು ಫೋರಂನ ನಿರ್ದೇಶಕ ಮತ್ತು ಕೋ-ಚೇರ್ ಪರ್ಸನ್ ಆಗಿ ಕೆಲಸ ಮಾಡಲಿದ್ದಾರೆ ಎಂದು ಐಕೆಎಫ್ ಅಧ್ಯಕ್ಷರೂ ಆದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಮಿಕ್ಕಂತೆ, ಆಟೋಮೊಬೈಲ್ ಕ್ಷೇತ್ರದಿಂದ ಕಿರ್ಲೋಸ್ಕರ್ ಸಿಸ್ಟಮ್ಸ್ ನ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್, ಏರೋಸ್ಪೇಸ್ ಮತ್ತು ರಕ್ಷಣಾ ವಲಯದಿಂದ ಏಕಸ್ ಇಂಕ್ ಸಮೂಹದ ಅಧ್ಯಕ್ಷ ಅರವಿಂದ್ ಮೆಳ್ಳಿಗೇರಿ, ಉತ್ಪಾದನಾ ಸೇವೆಗಳ ವಲಯದಿಂದ ಜೆಟ್ವರ್ಕ್ಸ್ ಕಂಪನಿಯ ಸಹಸಂಸ್ಥಾಪಕ ಅಂಕಿತ್ ಫತೇಪುರಿಯಾ ಮತ್ತು ಮಶೀನ್ ಟೂಲ್ಸ್ ವಲಯದಿಂದ ಕೆನ್ನಮೆಟಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕೃಷ್ಣನ್ ವೆಂಕಟೇಶನ್ ಅವರನ್ನು ಇನ್ವೆಸ್ಟ್ ಕರ್ನಾಟಕ ಫೋರಂನ ನಿರ್ದೇಶಕರುಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
