ಆಗ್ರಾ, 22 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಥುರಾದ ವೃಂದಾವನ್ ಮತ್ತು ಅಜೈ ನಿಲ್ದಾಣಗಳ ನಡುವಿನ ಭಾಗದಲ್ಲಿ ಮಂಗಳವಾರ ರಾತ್ರಿ 12 ಸರಕು ರೈಲು ಬೋಗಿಗಳು ಹಳಿತಪ್ಪಿ, ಆಗ್ರಾ–ದೆಹಲಿ ರೈಲು ಮಾರ್ಗದಲ್ಲಿ ತೀವ್ರ ಅಡಚಣೆ ಉಂಟಾಗಿದೆ.
ಅಪಘಾತದ ಪರಿಣಾಮವಾಗಿ ಶತಾಬ್ದಿ, ವಂದೇ ಭಾರತ್ ಸೇರಿದಂತೆ ಹಲವಾರು ಪ್ರಯಾಣಿಕ ರೈಲುಗಳು ರದ್ದುಗೊಂಡಿದ್ದು, ಕೆಲವೊಂದು ಮಾರ್ಗ ಬದಲಾಯಿಸಲಾಗಿದೆ. ಮಥುರಾ ತಲುಪುವ ಮೊದಲು ಆಗ್ರಾ ಕ್ಯಾಂಟ್ ನಲ್ಲಿ ರೈಲುಗಳನ್ನು ನಿಲ್ಲಿಸಲಾಗಿದೆ ಮತ್ತು ಮಾರ್ಗ ಬದಲಿಸಲು ಕ್ರಮ ಕೈಗೊಳ್ಳಲಾಗಿದೆ. ತೀವ್ರ ಪರಿಣಾಮ ಬೀರುವ ಮೂರು ಮಾರ್ಗಗಳು ಅಪಘಾತ ಸ್ಥಳದಲ್ಲಿ ಸ್ಥಗಿತಗೊಂಡಿದ್ದು, ನಾಲ್ಕನೇ ಮಾರ್ಗವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಪಲ್ವಾಲ್–ಮಥುರಾ ವಿಭಾಗದ ವ್ಯಾಪ್ತಿಯಲ್ಲಿ ವೃಂದಾವನ್ ಮತ್ತು ಅಜೈ ನಿಲ್ದಾಣಗಳ ನಡುವಣ ಭಾಗದಲ್ಲಿ ಅಪಘಾತ ಸಂಭವಿಸಿದೆ. ಆಗ್ರಾದಿಂದ ಪರಿಹಾರ ಮತ್ತು ರಕ್ಷಣಾ ರೈಲನ್ನು ತಕ್ಷಣ ಕಳುಹಿಸಲಾಗಿದೆ ಎಂದು ಆಗ್ರಾ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಶಾಂತಿ ಶ್ರೀವಾಸ್ತವ ತಿಳಿಸಿದ್ದಾರೆ.
ರೈಲು ಅಪಘಾತದಲ್ಲಿ ಯಾವುದೇ ಸಾವು ಅಥವಾ ಗಾಯ ಸಂಭವಿಸಿಲ್ಲ ಆದರೆ ದೀಪಾವಳಿ ಹಬ್ಬದ ವೇಳೆ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿದ್ದು, ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಸಹಕರಿಸುವಂತೆ ಕೋರಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
