ಮೈಸೂರು, 09 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸಾಹಿತಿ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದನ್ನು ಖಂಡಿಸಿ ಚಾಮುಂಡಿ ಚಲೋಗೆ ಮುಂದಾಗಿದ್ದ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಂದೂ ಜಾಗರಣಾ ವೇದಿಕೆ ಈ ಪಾದಯಾತ್ರೆಗೆ ಕರೆ ನೀಡಿದ್ದರೆ, ಬಾನು ಮುಷ್ತಾಕ್ ಆಯ್ಕೆ ಸಮರ್ಥಿಸಲು ದಲಿತ ಸಂಘಟನೆಗಳೂ ಪಾದಯಾತ್ರೆಗೆ ಸಿದ್ಧವಾಗಿದ್ದವು. ಆದರೆ, ಯಾವುದೇ ಪಾದಯಾತ್ರೆಗೆ ಪೊಲೀಸರು ಅನುಮತಿ ನೀಡಿರಲಿಲ್ಲ.
ಸಂಗೊಳ್ಳಿ ರಾಯಣ್ಣ ವೃತ್ತ, ಕುರುಬರಹಳ್ಳಿ ವೃತ್ತ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದ್ದರು. ಪಾದಯಾತ್ರೆಗೆ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸ್ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಬಾನು ಮುಷ್ತಾಕ್ ಆಯ್ಕೆ ಪರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಲು ಬಂದಿದ್ದ ದಲಿತ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಅವರನ್ನು ಸಹ ಪೊಲೀಸರು ತಡೆದು ವಶಕ್ಕೆ ಪಡೆದರು.
ಚಾಮುಂಡಿ ಬೆಟ್ಟಕ್ಕೆ ಹೋಗುವ ಎಲ್ಲಾ ಮಾರ್ಗಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
