ಬೆಂಗಳೂರು, 20 ಆಗಸ್ಟ್ (ಹಿ.ಸ.) :
ಆ್ಯಂಕರ್ : ದಿ.ದೇವರಾಜ್ ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕಾರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ, ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಲು ಶ್ರಮಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿಧಾನ ಸೌದಧ ಬ್ಯಾಂಕ್ವೆಟ್ ಹಾಲಿನಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110 ನೇ ಜನ್ಮದಿನಾಚರಣೆ ಹಾಗೂ ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೇವರಾಜ ಅರಸು ಅವರು ಎಂಟು ವರ್ಷಗಳ ಕಾಲ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಅವರ ನಂತರ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದು ನಾನೇ. ಅವರಂತೆ ನಾನೂ ಮುಖ್ಯಮಂತ್ರಿಯಾಗಿ 5 ವರ್ಷಗಳನ್ನು ಪೂರೈಸಿದ್ದೇನೆ. ಈ ವಿಚಾರದಲ್ಲಿ ನಮ್ಮಿಬ್ಬರಿಗೂ ಸಾಮ್ಯತೆ ಇದೆ ಎಂದರು.
ದೇವರಾಜ ಅರಸು ಅವರು ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರಲು ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ದೊರಕಬೇಕೆಂದು ನಂಬಿದ್ದರು. ಇವುಗಳಿಲ್ಲದೇ ರಾಜಕೀಯ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಹೇಳಿದ್ದರು. ಸಮಾಜದಲ್ಲಿ ಎಲ್ಲಿಯವರೆಗೆ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಸ್ವಾತಂತ್ರ್ಯ ಸೌಧ ಗಟ್ಟಿಯಾಗಿರಲು ಸಾಧ್ಯವಿಲ್ಲ. ಅಸಮಾನತೆಯಿಂದ ನರಳುವ ಜನ ಎಂದಾದರೂ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದು ಹೇಳಿದ್ದರು. ಈ ವಿಚಾರದಲ್ಲಿ ಅಪಾರವಾದ ನಂಬಿಕೆಯನ್ನಿಟ್ಟವರು ದೇವರಾಜ ಅರಸು ಎಂದರು.
ಅರಸು ಅವರು ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಅನುಭವಿಸದಿದ್ದರೂ ಈ ವಿಚಾರಗಳಲ್ಲಿ ನಂಬಿಕೆ ಇರಿಸಿಕೊಂಡಿದ್ದರಲ್ಲದೇ ಅದನ್ನು ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರು. ಅವರು ಮುಖ್ಯಮಂತ್ರಿಯಾದಾಗ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕೆಂದು ಪ್ರತಿಪಾದಿಸಿದ್ದರು. ಜಾತಿ, ವರ್ಗ ವ್ಯವಸ್ಥೆಯಿರುವ ಸಮಾಜದಲ್ಲಿ ಎಲ್ಲರಿಗೂ ಆರ್ಥಿಕ ಸಾಮಾಜಿಕ ಶಕ್ತಿ, ಸ್ವಾವಲಂಬನೆ ಬರಬೇಕು. ಅದಿಲ್ಲದೇ ಜಾತಿ, ವರ್ಗ ಯಾವುದೂ ಹೋಗುವುದಿಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
