ನವದೆಹಲಿ, 20 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಂಸತ್ತಿನ ಉಭಯ ಸದನಗಳು ಭಾರತೀಯ ನಿರ್ವಹಣಾ ಸಂಸ್ಥೆ (ತಿದ್ದುಪಡಿ) ಮಸೂದೆ 2025 ಅನ್ನು ಅಂಗೀಕರಿಸಿವೆ. ಇದರ ಮೂಲಕ ದೇಶದ 22ನೇ ಹಾಗೂ ಅಸ್ಸಾಂನ ಮೊದಲ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ) ಗುವಾಹಟಿಯಲ್ಲಿ ಸ್ಥಾಪನೆಗೊಳ್ಳಲಿದೆ.
ರಾಜ್ಯ ಸಭೆ ಬುಧವಾರ ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಿತು. ಲೋಕ ಸಭೆ ಇದನ್ನು ಮಂಗಳವಾರವೇ ಅಂಗೀಕರಿಸಿತ್ತು. ಗುವಾಹಟಿ ಐಐಎಂಗೆ ಕೇಂದ್ರ ಸರ್ಕಾರವು ₹550 ಕೋಟಿ ಬಂಡವಾಳ ನೆರವು ನೀಡಲಿದೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಇದು ಕೇವಲ ಒಂದು ಶಿಕ್ಷಣ ಸಂಸ್ಥೆಯ ಸ್ಥಾಪನೆಯಲ್ಲ, ಅಸ್ಸಾಂ ಹಾಗೂ ಈಶಾನ್ಯ ಭಾರತದ ಐತಿಹಾಸಿಕ ಕ್ಷಣ. ಐಐಟಿ ಗುವಾಹಟಿ, ಎನ್‌ಐಟಿ ಸಿಲ್ಚಾರ್, ಕೇಂದ್ರೀಯ ವಿಶ್ವವಿದ್ಯಾಲಯ ಇದ್ದರೂ, ಐಐಎಂ ಕೊರತೆ ಇತ್ತು. ಈಗ ಆ ಕೊರತೆಯನ್ನು ನೀಗಿಸಲಾಗುತ್ತಿದೆ ಎಂದರು.
ಮಸೂದೆಯ ಅಂಗೀಕಾರದೊಂದಿಗೆ ಗುವಾಹಟಿ ಐಐಎಂಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಸ್ಥಾನಮಾನ ಸಿಗಲಿದೆ. ಇದರ ಮೂಲಕ ಈಶಾನ್ಯ ಭಾರತದಲ್ಲಿ ಉನ್ನತ ಶಿಕ್ಷಣ, ಸಂಶೋಧನೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರಕಲಿದೆ.
—————
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
