ಹೊಶಿಯಾರ್ಪುರ್, 07 ಜುಲೈ (ಹಿ.ಸ.) :
ಆ್ಯಂಕರ್ : ಬಸ್ ಮಗುಚಿ ಬಿದ್ದ ಪರಿಣಾಮ ಮಗು ಸೇರಿದಂತೆ 8 ಮಂದಿ ಪ್ರಯಾಣಿಕರು ಮೃತಪಟ್ಟ ಘಟನೆ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ದಾಸುಯಾ- ಹಾಜಿಪುರ ರಸ್ತೆಯ ಸಗ್ರಾನ್ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ 32 ಮಂದಿ ಗಾಯಗೊಂಡಿದ್ದಾರೆ.
40 ಮಂದಿ ಪ್ರಯಾಣಿಕರನ್ನು ಹೊತ್ತ ಬಸ್ ಹಾಜಿಪುರದಿಂದ ದಾಸುಯಾಗೆ ತೆರಳುತ್ತಿತ್ತು. ಈ ವೇಳೆ ಬಸ್ಗೆ ಎದುರಾಗಿ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬಸ್ ರಸ್ತೆಯ ಮಧ್ಯದಲ್ಲಿಯೇ ಉರುಳಿಬಿದ್ದಿದೆ.
ಸ್ಥಳೀಯ ಗ್ರಾಮಸ್ಥರು ಮತ್ತು ಪೊಲೀಸರು ತಕ್ಷಣ ಅಪಘಾತ ಸ್ಥಳಕ್ಕೆ ದೌಡಾಯಿಸಿದರು. ಗಂಭೀರವಾಗಿ ಗಾಯಗೊಂಡವರನ್ನು ಬಸ್ಸಿನಿಂದ ಹೊರ ತೆಗೆಯಲು ಜೆಸಿಬಿ ಯಂತ್ರವನ್ನು ಬಳಸಲಾಯಿತು. ಪ್ರಯಾಣಿಕರ ಗಂಭೀರ ಸ್ಥಿತಿಯಲ್ಲಿದ್ದು. ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.
ಗಾಯಾಳುಗಳನ್ನು ದಾಸುಯಾದಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರವಾಗಿ ಗಾಯಗೊಂಡ 15ಕ್ಕೂ ಹೆಚ್ಚು ಪ್ರಯಾಣಿಕರನ್ನು ಅಮೃತಸರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನ ಚಾಲಕ ಕೂಡ ಗಂಭೀರ ಗಾಯಗೊಂಡಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಬಸ್ಸಿನ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಮೃತರನ್ನು ಗುರುತಿಸಲು ಅವರ ಸಂಬಂಧಿಕರಿಗೆ ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
