ಎಡ್ಜ್ ಬಾಸ್ಟನ್, 07 ಜುಲೈ (ಹಿ.ಸ) :
ಆ್ಯಂಕರ್ : ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ಎಡ್ಜ್ ಬಾಸ್ಟನ್ ಮೈದಾನದಲ್ಲಿ ಟೆಸ್ಟ್ ಪಂದ್ಯ ಜಯಿಸಿತು. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವಿನ ಸಿಹಿ ಅನುಭವಿಸಿತು. ಇದೀಗ ಉಭಯ ತಂಡಗಳು ಸರಣಿಯಲ್ಲಿ 1-1ರೊಂದಿಗೆ ಸಮಬಲ ಸಾಧಿಸಿವೆ.
ಇದು ಶುಭಮನ್ ಗಿಲ್ ನೇತೃತ್ವದಲ್ಲಿ ಟೀಂ ಇಂಡಿಯಾಗೆ ಸಿಕ್ಕ ಮೊದಲ ಗೆಲುವು. ಸರಣಿಯ ಮೊದಲ ಪಂದ್ಯವನ್ನು ಉತ್ತಮ ಪ್ರದರ್ಶನ ನೀಡಿಯೂ ಭಾರತ ಗೆಲುವು ಕೈಚೆಲ್ಲಿತ್ತು.
ನಾಯಕನಾಗಿ ಮೊದಲ ಟೆಸ್ಟ್ ಗೆಲುವು ಸಾಧಿಸಿದ ಶುಭಮನ್ ಗಿಲ್ ಎರಡನೇ ಟೆಸ್ಟ್ ನ ಎರಡೂ ಇನ್ನಿಂಗ್ಸ್ ನಲ್ಲೂ ಶತಕದಾಟವಾಡಿ ದಾಖಲೆ ಬರೆದರು. ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕದಾಟವಾಡಿದರೆ (269 ರನ್), ಎರಡನೇ ಇನ್ನಿಂಗ್ಸ್ ನಲ್ಲೂ ಶತಕ (161ರನ್) ಗಳಿಸಿದ್ದರು. ಅಷ್ಟೇ ಅಲ್ಲದೇ ಗಿಲ್ ನಾಯಕತ್ವದಲ್ಲಿ ಭಾರತ ಇದೇ ಮೊದಲ ಬಾರಿಗೆ ಎಡ್ಜ್ ಬಾಸ್ಟನ್ ಟೆಸ್ಟ್ ಜಯಿಸಿತು.
ಇಂಗ್ಲೆಂಡ್ ಪರ ಜೇಮಿ ಸ್ಮಿತ್ ಟೀಂ ಇಂಡಿಯಾಗೆ ಇಂದು ಕೊಂಚ ಸವಾಲೊಡ್ಡಿದರು. ಉಳಿದಂತೆ ತಂಡದ ಬ್ಯಾಟರ್ ಗಳು ಟೀಂ ಇಂಡಿಯಾ ಬೌಲರ್ ಗಳ ಕರಾರುವಾಕ್ ದಾಳಿಗೆ ಸಿಲುಕಿ ಮಂಕಾದರು. ಇದರೊಂದಿಗೆ 2ನೇ ಟೆಸ್ಟ್ ಅಂತ್ಯದೊಂದಿಗೆ ಇಂಗ್ಲೆಂಡ್ ತವರಿನಲ್ಲಿ 336 ರನ್ ಗಳ ದೊಡ್ಡ ಅಂತರದ ಸೋಲು ಕಂಡಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
