ನವದೆಹಲಿ, 11 ಮೇ : ಆ್ಯಂಕರ್:ಫ್ರಾನ್ಸ್ ನಲ್ಲಿ ಈ ತಿಂಗಳ ೧೪ ರಿಂದ ೨೫ರವರೆಗೆ ನಡೆಯಲಿರುವ ೭೭ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾರತ ಭಾಗಿಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಹಾಗೂ ಚಲನಚಿತ್ರ ಉದ್ಯಮದ ಸದಸ್ಯರನ್ನೊಳಗೊಂಡ ಭಾರತೀಯ ಕಾರ್ಪೊರೇಟ್ ನಿಯೋಗ, ವಿಶ್ವದ ಸಿನಿಮಾ ಮಾರುಕಟ್ಟೆಯಲ್ಲಿ ಭಾರತದ ಸೃಜನಶೀಲ ಆರ್ಥಿಕತೆಯನ್ನು ಪ್ರದರ್ಶಿಸಲಿದೆ. ಮೊದಲ ಬಾರಿಗೆ ಭಾರತ, ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾರತ್ ಪರ್ವ್ ಆಯೋಜಿಸಲಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ತಿಳಿಸಿದೆ.ಭಾರತೀಯ ಚಲನಚಿತ್ರ ಸಮುದಾಯ ವಿವಿಧ ಚುಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕೇನ್ಸ್ನಲ್ಲಿ ಭಾರತ್ ಪೆವಿಲಿಯನ್ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ. ಭಾರತ್ ಪರ್ವ್ನಲ್ಲಿ ಗೋವಾದಲ್ಲಿ ನಡೆಯುವ ೫೫ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆ ಮಾಡಲಾಗುವುದು.
