ನೈರೋಬಿ, 30 ಏಪ್ರಿಲ್ ಆ್ಯಂಕರ್:ಭೀಕರ ಮಳೆ ಹಾಗೂ ಅಣೆಕಟ್ಟು ಕುಸಿತದಿಂದ ಕಂಗಾಲಾಗಿರೋ ಕಿನ್ಯಾ ದೇಶ ಸಂಕಷ್ಟಕ್ಕೆ ಸಿಲುಕಿದೆ. ವರುಣಾರ್ಭಟಕ್ಕೆ ಕಿನ್ಯಾದಲ್ಲಿ 40 ಮಂದಿ ಪ್ರಾಣ ಕಳೆದುಕೊಂಡಿದ್ದು, ಇಡೀ ದೇಶದ ಚಿತ್ರಣವೇ ಬದಲಾಗಿಹೋಗಿದೆ. ಮಳೆರಾಯನ ಅಬ್ಬರಕ್ಕೆ ಜನರ ಬದುಕು ಮುರಾಬಟ್ಟೆಯಾಗಿದ್ದು ಪ್ರವಾಹದ ಪಾಶ ಜನರ ಜೀವ ಹಿಂಡುತ್ತಿದೆ.ಎತ್ತ ನೋಡಿದ್ರು ನೀರು. ಜಲಾವೃತವಾಗಿರೋ ಜನವಸತಿ ಪ್ರದೇಶ. ಆಟಿಕೆಗಳಂತೆ ತೇಲಿಹೋಗ್ತಿರೋ ವಾಹನ. ಪ್ರವಾಹದಿಂದ ಪಾರಾಗಲು ಜನರ ಪರದಾಟ. ಈ ದೃಶ್ಯಗಳೇ ಹೇಳ್ತಿವೇ ಅದ್ಯಾವ ಮಟ್ಟಿಗೆ ವರುಣಾ ಇಲ್ಲಿ ಅಬ್ಬರಿಸಿ ಬೊಬ್ಬರಿದಿದ್ದಾನೆ. ಅಷ್ಟಕ್ಕೂ ಈ ದೃಶ್ಯಗಳು ಆಫ್ರಿಕಾ ಖಂಡದಲ್ಲಿರುವ ಪುಟ್ಟ ದೇಶ ಕೀನ್ಯಾದ್ದು.
ಕೀನ್ಯಾದ ರಾಜಧಾನಿ ನೈರೋಬಿಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಗ್ರೇಟ್ ರಿಫ್ಟ್ ವ್ಯಾಲಿ ಪ್ರದೇಶದ ಹಳೆಯ ಕಿಜಾಬೆ ಅಣೆಕಟ್ಟು ಕುಸಿತಗೊಂಡು ಇಂತದೊಂದು ದುರಂತ ಸಂಭವಿಸಿದೆ. ಕೀನ್ಯಾದಲ್ಲಿ ಕಳೆದೊಂದು ವಾರದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಡ್ಯಾಂಗಳು ಭರ್ತಿಯಾಗಿದೆ. ಭರ್ತಿಯಾಗಿದ್ದ ಕಿಜಾಬೆ ಅಣೆಕಟ್ಟು, ಕುಸಿದಿದೆ. ಪರಿಣಾಮ ಜಲಾಶಯದ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿ, ಸುಮಾರು 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮನೆಗಳು, ರಸ್ತೆಗಳು ಕೊಚ್ಚಿ ಹೋಗಿದ್ದು, ಹಲವು ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ.
