ಬೆಂಗಳೂರು, 23 ಏಪ್ರಿಲ್ಆ್ಯಂ ಕರ್:ಬರ ಪರಿಹಾರ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಕದ ತಟ್ಟಿದ್ದ ಕಾಂಗ್ರೆಸ್ ಗೆ ಮೊದಲ ಹಂತದ ಲೀಡ್ ಸಿಕ್ಕಿದೆ. ಈ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಲು ಸಿದ್ದರಾಮಯ್ಯ ಸರ್ಕಾರ ಸಜ್ಜಾಗಿದೆ. ಇದರ ಭಾಗವಾಗಿ ಮತ್ತೊಂದು ಬೃಹತ್ ಪ್ರತಿಭಟನೆಗೆ ವೇದಿಕೆ ಸಿದ್ಧವಾಗಿದೆ.
ಇದು ಕಳೆದೆರಡು ತಿಂಗಳ ಹಿಂದೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ರಣಕಹಳೆ ಮೊಳಗಿಸಿದ್ದ ಪರಿ. ಇಡೀ ಕರುನಾಡಿನ ಕಾಂಗ್ರೆಸ್ ಬಳಗವೇ ರಾಷ್ಟ್ರ ರಾಜಧಾನಿಯಲ್ಲಿ ಅಬ್ಬರಿಸಿ ಬೊಬ್ಬಿರಿದಿತ್ತು. ಇದೀಗ ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಬರ ಪರಿಹಾರ ಬಿಡುಗಡೆಯ ಸಂಘರ್ಷ ಮತ್ತಷ್ಟು ಜೋರಾಗೋ ಲಕ್ಷಣ ಕಾಣಿಸ್ತಿದೆ. ಯಾಕಂದ್ರೆ ಮೋದಿ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ.
ದಶಕದ ಬಳಿಕ ರಾಜ್ಯ ಭೀಕರ ಬರ ಪರಿಸ್ಥಿತಿ ಎದುರಿಸ್ತಿದೆ. ಇದನ್ನ ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ 18 ಸಾವಿರ ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿಸಿ ಅಂತ ಸರ್ವೋಚ್ಚ ನ್ಯಾಯಾಲಯ ಮಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ, ಆದಷ್ಟು ಬೇಗ ಬರ ಪರಿಹಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ ಅಂತ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಬೆನ್ನಲ್ಲೇ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಿದ್ದು, ಇಂದು ರಣಕಹಳೆ ಮೊಳಗಲಿದೆ.
ಬರ ಪರಿಹಾರ ಬಿಡುಗಡೆಗೆ ಒತ್ತಾಯಿಸಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಾಳಯ ಸಿದ್ಧತೆ ಮಾಡಿಕೊಳ್ತಿದೆ. ವಿಧಾನಸೌಧದ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಬೆಳಗ್ಗೆ 9.30ಕ್ಕೆ ಪ್ರತಿಭಟನೆ ಆರಂಭವಾಗಲಿದ್ದು, ಈ ವೇಳೆ ಕೇಂದ್ರದ ವಿರುದ್ಧ ಆಕ್ರೋಶದ ಬಾಣಗಳು ಸಿಡಿಯಲಿವೆ. ಇನ್ನು, ಈ ಪ್ರತಿಭಟನೆಯಲ್ಲಿ ಎಲ್ಲ ಶಾಸಕರೂ ಕಡ್ಡಾಯವಾಗಿ ಭಾಗಿಯಾಗಬೇಕು ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ. ಹೀಗಾಗಿ ಇಡೀ ಹಸ್ತ ಬಳಗ ಇಂದು ವಿಧಾನಸೌಧದ ಮುಂದೆ ನಡೆಯಲಿರೋ ಪ್ರತಿಭಟನೆಯಲ್ಲಿ ಭಾಗಿಯಾಗಲಿದೆ. ಕೇಂದ್ರದ ನೀತಿ ವಿರುದ್ಧ ಕಿಚ್ಚು ಹೊತ್ತಲಿದೆ.
