ಮಂಡ್ಯ, ಆ್ಯಂಕರ್:ಕಳೆದ ವಿಧಾನಸಭಾ ಚುನಾವಣೆಯಂತೆ ಈ ಬಾರಿಯ ಲೋಕಸಭಾ ಅಖಾಡದಲ್ಲೂ ಮಂಡ್ಯದಲ್ಲಿ ದಳಪತಿಗಳನ್ನು ಕಟ್ಟಿ ಹಾಕಬೇಕೆಂದು ಕಾಂಗ್ರೆಸ್ ನಾಯಕರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಸೋಲಿಸೋದು ಅಷ್ಟು ಸುಲಭದ ಮಾತಲ್ಲ ಎಂದು ಕೈ ನಾಯಕರಿಗೂ ತಿಳಿದಿದೆ. ಅದೇ ಕಾರಣಕ್ಕೆ ಕೈ ನಾಯಕರು ಕುಮಾರಸ್ವಾಮಿ ಮಣಿಸಲು ತಂತ್ರ ರೂಪಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಪರ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಬ್ಬರದ ಪ್ರಚಾರ ಮಾಡಿದ್ದರು. ಇವರಿಬ್ಬರ ಪ್ರಚಾರ ಸುಮಲತಾ ಅಂಬರೀಶ್ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.
ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಮಂಡ್ಯ ಲೋಕಸಭಾ ಚುನಾವಣೆಯ ಪ್ರಚಾರದ ಅಖಾಡಕ್ಕೆ ಕಾಂಗ್ರೆಸ್ ಇಂದು ಕರೆತರುತ್ತಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಬೆನ್ನಿಗೆ ನಿಂತಿದ್ದ ದರ್ಶನ್ ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು ಪರ ಅಬ್ಬರದ ಪ್ರಚಾರ ಮಾಡಲು ಮುಂದಾಗಿದ್ದಾರೆ. ಸುಮಲತಾ ಅವರು ದರ್ಶನ್ ಅವರನ್ನು ತಮ್ಮ ಮೊದಲ ಮಗ ಎಂದು ಹೇಳುತ್ತಿದ್ದರು. ಸುಮಲತಾ ಅವರು ತಮ್ಮ ನಿಲುವು ಘೋಷಣೆ ಮಾಡುವ ವೇಳೆಯೂ ದರ್ಶನ್ ಅವರೊಂದಿಗೆ ಬೆನ್ನಿಗೆ ನಿಂತಿದ್ದರು. ಸುಮಲತಾ ಅವರು ಬಿಜೆಪಿ ಸೇರ್ಪಡೆಯಾಗಿ ಬಿಜೆಪಿ-ಜೆಡಿಎಸ್ಗೆ ಬೆಂಬಲ ಸಹ ಘೋಷಣೆ ಮಾಡಿದ್ದಾರೆ. ಇದೀಗ ದರ್ಶನ್ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧವಾಗಿ ಮಂಡ್ಯದಲ್ಲಿ ದರ್ಶನ್ ಅವರು ಪ್ರಚಾರಕ್ಕೆ ಧುಮುಕಿದ್ದಾರೆ.
