ಬೆಂಗಳೂರು,
ಆ್ಯಂಕರ್:ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಸಣ್ಣಮಟ್ಟಿನ ಜನ ಸಮುದಾಯವನ್ನು ತಲುಪಿ ಪ್ರಚಾರ ಮಾಡುವವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಮೈಕ್ ಇಲ್ಲ, ಚೇರ್ ಗಳು ಇಲ್ಲ’ (‘ನೋ ಮೈಕ್, ನೋ ಚೇರ್ಸ್’ )ಅಭಿಯಾನ ಹಮ್ಮಿಕೊಂಡಿದೆ. ತಳಮಟ್ಟದಲ್ಲಿ ಜನರನ್ನು ತಲುಪುವ ಉದ್ದೇಶದೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಏಪ್ರಿಲ್ 5ರ ಒಳಗೆ ರಾಜ್ಯದ ಎಲ್ಲಾ ಕಡೆಗಳಲ್ಲಿ ಚುನಾವಣಾ ಪ್ರಚಾರ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಅಭಿಯಾನದಡಿ ರಸ್ತೆ ಬದಿಗಳಲ್ಲಿ, ಸಣ್ಣಪುಟ್ಟ ಹಳ್ಳಿಗಳ ಮರಗಳ ಅಡಿಯಲ್ಲಿ ಅಥವಾ ಮನೆಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಗುತ್ತದೆ. ಒಂದು ಬಾರಿಯ ಸಭೆಯ ವೇಳೆ ಸುಮಾರು ನೂರು ಜನರನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ದೊಡ್ಡ ದೊಡ್ಡ ರ್ಯಾಲಿಗಳನ್ನು ನಡೆಸುವ ಬದಲು ಸಣ್ಣಪುಟ್ಟ ಸಭೆಗಳನ್ನು ನಡೆಸುವ ಮೂಲಕ ಜನರನ್ನು ತಲುಪುವುದು ಉತ್ತಮ ವಿಧಾನವಾಗಿದೆ. ಈ ಮೂಲಕ ಪ್ರತಿಯೊಬ್ಬರಿಗೂ ನಾವು ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡಬಹುದು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರ ಹೇಳಿದ್ದಾರೆ.
ವಿವಿಧ ಹಂತಗಳಲ್ಲಿ ಚುನಾವಣಾ ಪ್ರಚಾರ ಅಭಿಯಾನದ ರೀತಿಯನ್ನು ಪಕ್ಷ ಬದಲಾಯಿಸಿದೆ. 8 ಕ್ಲಸ್ಟರ್ ಗಳಲ್ಲಿ ದೊಡ್ಡ ಅಭಿಯಾನಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಈಗಾಗಲೇ ಬೃಹತ್ ಪ್ರಚಾರ ನಡೆಸಲಾಗಿದೆ. ದೊಡ್ಡ ಪ್ರಚಾರ ಅಭಿಯಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರಂಥ ನಾಯಕರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
