ನವದೆಹಲಿ,
ಹಿಂದೂಸ್ತಾನ್ ಯೂನಿಲಿವರ್ ನ ಮಾತೃ ಸಂಸ್ಥೆಯಾದ ಯುನಿಲಿವರ್ ತನ್ನ ಬಿಸಿನೆಸ್ ಮರು ರಚಿಸುತ್ತಿದೆ. ತನ್ನ ಐಸ್ ಕ್ರೀಮ್ ವಿಭಾಗವನ್ನೇ ಪ್ರತ್ಯೇಕ ಸಂಸ್ಥೆಯಾಗಿ ಮಾಡಲು ಯೋಜಿಸಿದೆ. ವೆಚ್ಚ ಉಳಿಸುವ ಅಮೂಲಾಗ್ರ ಯೋಜನೆಯ ಭಾಗವಾಗಿ ಈ ಪ್ಲಾನ್ ಮಾಡಲಾಗಿದೆ. ಅದರಂತೆ 7,500 ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ವ
ರದಿಗಳ ಪ್ರಕಾರ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ತತ್ ಕ್ಷಣದಿಂದಲೇ ಆರಂಭವಾಗಲಿದ್ದು, 2025ರ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಬಹುದು. ಯೂನಿಲಿವರ್ ನಲ್ಲಿ ಬೆನ್ ಅಂಡ್ ಜೆರ್ರೀಸ್, ಮ್ಯಾಗ್ನಸ್ ಮೊದಲಾದ ಬ್ರ್ಯಾಂಡ್ನ ಐಸ್ ಕ್ರೀಮ್ ಬಿಸಿನೆಸ್ ಗಳಿವೆ. ಅವೆಲ್ಲವೂ ಸೇರಿ ಪ್ರತ್ಯೇಕ ಸಂಸ್ಥೆಯಾಗಿ ಹೊರಬರಬಹುದು.
ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಳ್ಳುವುದರಿಂದ ಯೂನಿಲಿವರ್ ಗೆ ಹೆಚ್ಚು ಅನುಕೂಲವಾಗಬಹುದು. ಸಂಸ್ಥೆಯ ಗಮನ ನಿರ್ದಿಷ್ಟಗೊಳಿಸಲು ಮತ್ತು ವ್ಯವಹಾರ ಸರಳಗೊಳಿಸಲು ಸಹಾಯವಾಗಲಿದೆ. ಹಾಗೆಯೇ, ವಿಶ್ವದಲ್ಲಿ ಅತಿದೊಡ್ಡ ಐಸ್ ಕ್ರೀಮ್ ಬಿಸಿನೆಸ್ ಸೃಷ್ಟಿ ಕೂಡ ಸಾಧ್ಯವಾಗುತ್ತದೆ. ಇದರಿಂದ ಐಸ್ ಕ್ರೀಮ್ ಬಿಸಿನೆಸ್ ಕೂಡ ಉತ್ತಮವಾಗಿ ಬೆಳೆಯಬಹುದು ಎಂದು ಯೂನಿಲಿವರ್ನ ಮುಖ್ಯಸ್ಥರಾದ ಇಯಾನ್ ಮೀಕಿನ್ಸ್ ಹೇಳಿದ್ದಾರೆ.
2023ರಲ್ಲಿ ಯುನಿಲಿವರ್ನ ಐಸ್ ಕ್ರೀಮ್ ವಿಭಾಗ ಜಾಗತಿಕವಾಗಿ 8.6 ಬಿಲಿಯನ್ ಡಾಲರ್ ಮೊತ್ತದಷ್ಟು ಮಾರಾಟ ಕಂಡಿತ್ತು. ಈಗ ಪ್ರತ್ಯೇಕ ಸಂಸ್ಥೆಯಾಗುವುದರಿಂದ ಆ ವ್ಯವಹಾರದ ಮೇಲೆ ಪ್ರತ್ಯೇಕವಾಗಿ ಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ.
