ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕದಡಿ ಜನವರಿ ೨೦೨೪ರಲ್ಲಿ ಕಲ್ಲಿದ್ದಲು ವಲಯ ಶೇಕಡ ೧೦.೨ರಷ್ಟು ಪ್ರಗತಿ ದಾಖಲಿಸಿದೆ. ಕಲ್ಲಿದ್ದಲು ಸಚಿವಾಲಯದ ತಾತ್ಕಾಲಿಕ ಅಂಕಿಅಂಶದ ಪ್ರಕಾರ, ಕಲ್ಲಿದ್ದಲು ವಲಯದ ಸೂಚ್ಯಂಕ ಕಳೆದ ವರ್ಷದ ಜನವರಿಯಲ್ಲಿ ೧೯೮.೬ ಅಂಕಗಳಷ್ಟಿದ್ದು, ಈ ವರ್ಷದ ಜನವರಿಯಲ್ಲಿ ೨೧೮.೯ ಅಂಕ ತಲುಪಿದೆ. ಕಳೆದ ವರ್ಷದ ಏಪ್ರಿಲ್ ನಿಂದ ಜನವರಿ ಅವಧಿಗೆ ಹೋಲಿಸಿದರೆ ಈ ವರ್ಷದಲ್ಲಿ ಒಟ್ಟಾರೆ ಸೂಚ್ಯಂಕ ಶೇಕಡ ೧೨.೨ ರಷ್ಟು ಹೆಚ್ಚಳ ಕಂಡಿದೆ. ಜನವರಿ ೨೦೨೪ ರಲ್ಲಿ ಎಂಟು ವಲಯಗಳ ಒಟ್ಟು ಸೂಚ್ಯಂಕ ಶೇಕಡ ೩.೬ರಷ್ಟು ಹೆಚ್ಚಾಗಿದ್ದು, ಒಟ್ಟಾರೆ ಕೈಗಾರಿಕಾ ವಿಸ್ತರಣೆಯಲ್ಲಿ ಕಲ್ಲಿದ್ದಲು ವಲಯದ ಕೊಡುಗೆ ಗಣನೀಯವಾಗಿದೆ. ಜನವರಿ ೨೦೨೪ರಲ್ಲಿ ಕಲ್ಲಿದ್ದಲು ಉತ್ಪಾದನೆ ೯೯.೭೩ ದಶಲಕ್ಷ ಟನ್ಗಳಷ್ಟಾಗಿದ್ದು, ಇದು ಗಣನೀಯ ಏರಿಕೆಯಾಗಿರುವುದು ಪ್ರಗತಿಗೆ ಪೂರಕವಾಗಿದೆ ಎಂದು ಸಚಿವಾಲಯ ಹೇಳಿದೆ. ಕಲ್ಲಿದ್ದಲು ಸಚಿವಾಲಯದ ಪ್ರಯತ್ನಗಳು ಮತ್ತು ಉಪಕ್ರಮಗಳಿಂದಾಗಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ ೧೦.೨ ರಷ್ಟು ಹೆಚ್ಚಳ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
