ಬೆಂಗಳೂರು, 19 ಫೆಬ್ರವರಿ :
ಆ್ಯಂಕರ್ : ಪ್ರತಿಷ್ಠಿತ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತೆ ಬಂದಿದೆ. 15ನೇ ಬೆಂಗಳೂರು ಚಲನಚಿತ್ರೋತ್ಸವ (ಫಿಲಂ ಫೆಸ್ಟ್) ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಈ ಬಾರಿಯ ಚಲನಚಿತ್ರೋತ್ಸವ ಹಲವು ಕಾರಣಗಳಿಗೆ ಮುಖ್ಯವಾದುದಾಗಿದೆ.
ಈ ಬಾರಿ 50ಕ್ಕೂ ಹೆಚ್ಚು ರಾಷ್ಟ್ರಗಳಿಂದ. ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾದ ಸಿನಿಮಾಗಳೂ ಸೇರಿದಂತೆ 200ಕ್ಕೂ ಹೆಚ್ಚು ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ.
ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತರು, ಕಾನ್ (ಫ್ರಾನ್ಸ್), ಬರ್ಲಿನ್(ಜರ್ಮನಿ), ಕಾರ್ಲೋ ವಿವಾರಿ(ಜೆಕ್ರಿಪಬ್ಲಿಕ್. ಲೊಕಾರ್ನೊ (ಸ್ವಿಟ್ಸರ್ಲೆಂಡ್), ರಾಟರ್ಡ್ಯಾಮ್ (ನೆದಲ್ಯಾಂಡ್), ಬೂಸಾನ್ (ದಕ್ಷಿಣ ಕೊರಿಯಾ), ಟೊರಂಟೋ (ಕೆನಡಾ) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಒಂದೇ ಕಡೆ ಸಿನಿಮಾಪ್ರಿಯರಿಗೆ ದೊರೆಯುತ್ತವೆ.
ಚಿತ್ರೋತ್ಸವದ ಸ್ಪರ್ಧಾ ವಿಭಾಗದ ಮಾಹಿತಿ
ಏಷಿಯನ್ ಸ್ಪರ್ಧಾ ವಿಭಾಗ, ಚಿತ್ರಭಾರತಿ-ಭಾರತೀಯ ಸ್ಪರ್ಧಾ ವಿಭಾಗ, ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಸಿನಿಮಾ, ವಿಮರ್ಶಕರ ವಾರ: ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ (ಫಿಪ್ರಸಿ) ಆಯ್ಕೆ ಮಾಡಿದ ಏಳು ವಿಶೇಷ ಸಮಕಾಲೀನ ಚಲನಚಿತ್ರಗಳ ಪ್ರದರ್ಶನ, ಜೀವನಾಧಾರಿತ ಚಿತ್ರಗಳು, ದೇಶ ಕೇಂದ್ರಿತ: ಜರ್ಮನಿಯ ಚಲನಚಿತ್ರಗಳ ವಿಶೇಷ ಪ್ರದರ್ಶನ, ಮಹಿಳಾ ಶಕ್ತಿ- ಮಹಿಳಾ ನಿರ್ದೇಶಕರ ಚಿತ್ರಗಳ ಪ್ರದರ್ಶನಗಳು ನಡೆಯಲಿವೆ. ಇದರ ಜೊತೆಗೆ ಭಾರತದ ಹಲವು ಉಪಭಾಷೆಗಳ ಸಿನಿಮಾಗಳ ಪ್ರದರ್ಶನವೂ ಆಗಲಿದೆ.
ಕನ್ನಡ ಉಪಭಾಷೆಗಳಾದ ತುಳು, ಕೊಡವ, ಬಂಜಾರ, ಅರೆಭಾಷೆ, ಮಾರ್ಕೋಡಿ ಅಲ್ಲದೆ, ಈಶಾನ್ಯ ಭಾರತದ ಕರ್ಬಿ, ರಾಬಾ, ಗಾಲೋ ಮತ್ತು ವಾಕೆ ಈ ಭಾಷೆಯ ಸಿನಿಮಾಗಳ ಪ್ರದರ್ಶನ ಆಗಲಿವೆ. ಪುನರಾವಲೋಕನ ಇರಾನಿನ ನಿರ್ದೇಶಕ ಅಬ್ಬಾಸ್ ಕಿರೋಸ್ತಮಿ ಮತ್ತು ಹಿರಿಯ ನಿರ್ದೇಶಕರಾದ ಮೃಣಾಲ್ಸೇನ್, ಜೊತೆಗೆ ಶತಮಾನೋತ್ಸವ ಸ್ಮರಣೆಯೂ ಇರಲಿದೆ.
