ಕೋಲಾರ, ೧೫ ಫೆಬ್ರವರಿ :
ಆ್ಯಂಕರ್ : ಹೆಣ್ಣುಮಕ್ಕಳಿಗೆ ಸಮಾಜ ಸಮಾನ ಸ್ಥಾನ ಮಾನ ನೀಡಿದೆ ಅವರೂ ಸಹಾ ತಮ್ಮ ಆತ್ಮರಕ್ಷಣೆಗೆ ಕರಾಟೆ ಕಲೆ ಕಲಿತು ಸಮಾಜದಲ್ಲಿ ಧೈರ್ಯದಿಂದ ಜೀವನ ನಡೆಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಚಿತ್ರನಟ ಹಾಗೂ ಕೋಲಾರದ ಬ್ರೂಸ್ಲಿ ಕರಾಟೆ ಶಾಲೆಯ ಮುಖ್ಯಸ್ಥ ಕರಾಟೆ ಶ್ರೀನಿವಾಸ್ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಲೆಯ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಕಲೆಯಾದ ಕರಾಟೆ ತರಬೇತಿ ನೀಡಿ ಮಾತನಾಡಿದರು.
ಸಮಾಜದಲ್ಲಿ ಸಮಾನತೆ, ಕಾನೂನುಗಳ ರಕ್ಷಣೆಯ ಮಾತುಗಳು ಸಾಮಾನ್ಯವಾದರೂ ದೌರ್ಜನ್ಯಕ್ಕೆ ಒಳಗಾದ ನಂತರ ಪರಿಹಾರ ಕಂಡುಕೊಳ್ಳಲು ಮಾತ್ರ ಇವುಗಳಿಂದ ಸಾಧ್ಯ ಎಂದ ಅವರು, ನೀವು ತುರ್ತು ಸಂದರ್ಭದಲ್ಲಿ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳುವ ಶಕ್ತಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕರಾಟೆ ಆತ್ಮರಕ್ಷಣೆಯ ಕಲೆಯಾಗಿದ್ದು, ನೀವು ಯಾರಿಂದಲಾದರೂ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭದಲ್ಲಿ ಅವರ ವಿರುದ್ದ ಧೈರ್ಯದಿಂದ ಮೆಟ್ಟಿನಿಲ್ಲಲು ಈ ಕಲೆ ಬಳಸಬೇಕು, ಹೆಣ್ಣು ಮಕ್ಕಳು ಇಂದು ಎಲ್ಲಾ ರಂಗಗಳಲ್ಲೂ ತಮ್ಮ ಶಕ್ತಿ ತೋರಿದ್ದಾರೆ, ಶೈಕ್ಷಣಿಕವಾಗಿ ಮಾತ್ರವಲ್ಲ ಕಾರ್ಯಾಂಗ, ಸೇನೆ, ಪೊಲೀಸ್ ಎಲ್ಲಾ ಕಡೆ ಕೆಲಸ ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯದಂತಹ ಸುದ್ದಿಗಳನ್ನು ಪ್ರತಿನಿತ್ಯವೂ ನೋಡುತ್ತಿದ್ದೇವೆ, ಇಂತಹ ಸಮಸ್ಯೆಗಳಿಂದ ಪಾರಾಗಲು ಮತ್ತು ತೊಂದರೆಗಳನ್ನು ಧೈರ್ಯದಿಂದ ಎದುರಿಸಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸರ್ಕಾರ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿಗೆ ವ್ಯವಸ್ಥೆ ಮಾಡಿದ್ದು, ಇದರ ಸದುಪಯೋಗ ಪಡೆಯಿರಿ ಎಂದರು.
ಶಾಲೆಯ ಮುಖ್ಯಶಿಕ್ಷಕಿ ತಾಹೇರಾ ನಸ್ರುತ್ ಮಾತನಾಡಿ, ಹೆಣ್ಣು ಮಕ್ಕಳು ಇಂದು ಸಮಾಜದಲ್ಲಿ ಅತ್ಯುನ್ನತ ಸ್ಥಾನ ಪಡೆದುಕೊಂಡಿದ್ದಾರೆ, ಶೈಕ್ಷಣಿಕ ಸಾಧನೆಯಲ್ಲಿ ಅವರನ್ನು ಮೀರಿಸುವವರೇ ಇಲ್ಲವಾಗಿದೆ, ಎಸ್ಸೆಸ್ಸೆಲ್ಸಿ, ಪಿಯುಸಿ ಮಾತ್ರವಲ್ಲ ಐಎಎಸ್, ಕೆಎಎಸ್ ಯಾವುದೇ ಪರೀಕ್ಷೆಗಳಲ್ಲೂ ಹೆಣ್ಣುಮಕ್ಕಳೇ ಹೆಚ್ಚಿನ ಸಾಧಕರು ಎಂದು ತಿಳಿಸಿದರು.
ನಿಮ್ಮ ಬದುಕಿನುದ್ದಕ್ಕೂ ಎದುರಾಗುವ ಯಾವುದೇ ದೌರ್ಜನ್ಯದಂತಹ ಸಮಸ್ಯೆಗಳಿಗೆ ಇತರರಿಂದ ಪರಿಹಾರ ಕೇಳುವ ಬದಲಿಗೆ ನಿಮ್ಮ ರಕ್ಷಣೆಗೆ ನೀವೇ ಪರಿಹಾರ ಕಂಡುಕೊಳ್ಳಲು ಕರಾಟೆ ಉತ್ತಮ ಸಾಧನವಾಗಿದ್ದು, ಇದರ ಸದುಪಯೋಗ ಪಡೆಯಿರಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ,ಸುಗುಣಾ, ಲೀಲಾ,ಫರೀದಾ, ರಮಾದೇವಿ, ಶ್ರೀನಿವಾಸಲು, ಚಂದ್ರಶೇಖರ್ ಮತ್ತಿತರರಿದ್ದರು.
ಚಿತ್ರ ; ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದ ಚಿತ್ರನಟ ಕರಾಟೆ ಶ್ರೀನಿವಾಸ್.
