ಮುಂಬೈ, 5 ಫೆಬ್ರವರಿ :
ಆ್ಯಂಕರ್ : ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ ದ್ವೈಸಿಕ ವಾಗಿ ನಡೆಸುವ ಸಭೆ ನಾಳೆ (ಫೆ. 6) ಆರಂಭವಾಗಲಿದೆ. ನಾಳೆ ಆರಂಭವಾಗಿ ಎರಡು ದಿನ ಸಭೆ ನಡೆಯುತ್ತದೆ. ಬಳಿಕ ಫೆಬ್ರುವರಿ 8ರಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ತಜ್ಞರ ಪ್ರಕಾರ ಈ ಬಾರಿಯೂ ಬಡ್ಡಿದರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇಲ್ಲ. ರಾಯ್ಟರ್ಸ್ ನಡೆಸಿದ ಆರ್ಥಿಕ ತಜ್ಞರ ಅಭಿಮತ ಸಂಗ್ರಹದಲ್ಲೂ ಇದೇ ಅನಿಸಿಕೆ ವ್ಯಕ್ತವಾಗಿದೆ. ಸದ್ಯ ಬಡ್ಡಿದರ ಅಥವಾ ರೆಪೋ ದರ ಶೇ. 6.5ರಷ್ಟಿದೆ. ಅದೇ ದರ ಮುಂದುವರಿಯಬಹುದು ಎನ್ನಲಾಗಿದೆ.
ಆರ್ಬಿಐ ರೆಪೋ ದರ ಪರಿಷ್ಕರಿಸಿ ಸರಿಯಾಗಿ ಒಂದು ವರ್ಷ ಆಯಿತು. 2023ರ ಫೆಬ್ರುವರಿಯಲ್ಲಿ ನಡೆದಿದ್ದ ಎಂಪಿಸಿ ಸಭೆಯಲ್ಲಿ ಶೇ. 6.25ರಷ್ಟಿದ್ದ ರೆಪೋ ದರವನ್ನು ಶೇ. 6.50ಕ್ಕೆ ಹೆಚ್ಚಿಸಲಾಗಿತ್ತು. ಅದಾದ ಬಳಕ ಸತತವಾಗಿ ದರದ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಹಣದುಬ್ಬರ ದರವೇ ಕಿಂಗ್ಪಿನ್
ಆರ್ಬಿಐ ರೆಪೋ ದರ ಪರಿಷ್ಕರಣೆಗೆ ಬಹುತೇಕ ಹಣದುಬ್ಬರ ದರವೇ ಆಧಾರವಾಗಿರುತ್ತದೆ. ಆರ್ಥಿಕತೆಯ ಓಟವನ್ನು ಇನ್ನಷ್ಟು ಸರಾಗಗೊಳಿಸಲು ಬಡ್ಡಿದರ ಕಡಿಮೆ ಮಾಡುವ ಅವಶ್ಯಕತೆ ಇದೆ. ಆದರೆ, ಹಣದುಬ್ಬರ ಈ ಕ್ರಮಕ್ಕೆ ಅಡ್ಡಿಯಾಗುತ್ತಾ ಬಂದಿದೆ. ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.69ರಷ್ಟಿದೆ. ಜನವರಿಯಲ್ಲೂ ಹೆಚ್ಚು ವ್ಯತ್ಯಯವಾಗುವುದು ಅನುಮಾನ. ಹೀಗಾಗಿ, ರೆಪೊ ದರವನ್ನು ಶೇ. 6.5ರ ದರದಲ್ಲೇ ಮುಂದುವರಿಸುವುದು ಆರ್ಬಿಐಗೆ ಅನಿವಾರ್ಯ ಆಗಬಹುದು.
