ರಾಯಚೂರು, 4 ಫೆಬ್ರವರಿ :
ಆ್ಯಂಕರ್: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ಮೇಲ್ವಿಚಾರಣೆಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಸ್ವಂತ ಖರ್ಚಿನಡಿಯಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅಪ್ರಾಳ್ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ ವಿದ್ಯುತ್ ಉಪ-ಕೇಂದ್ರವನ್ನು ಏತ ನೀರಾವರಿ ಯೋಜನೆಗಾಗಿ 9,900ಕವಿಎ ವಿದ್ಯುತ್ ಪೂರೈಕೆಗಾಗಿ ನಿರ್ಮಿಸಲಾಗಿದ್ದು ವಿದ್ಯುತ್ ಚಾಲನೆಗೊಳಿಸಬೇಕಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಈ ಉಪ- ಕೇಂದ್ರಕ್ಕೆ ಹೊಸದಾಗಿ 110ಕವಿ ಮಾರ್ಗವು ಹಾಲಿ ಇರುವ 110/11ಕೆವಿ ಗೂಗಲ್ ಉಪ-ಕೇಂದ್ರದಿಂದ ಉದ್ದೇಶಿತ ಅಪ್ರಾಳ್ ಉಪ-ಕೇಂದ್ರಕ್ಕೆ ನಿರ್ಮಿಸಲಾಗಿದ್ದು ವಿದ್ಯುತ್ ಚಾಲನೆಗೊಳಿಸಬೇಕಾಗಿದೆ. ಹೊಸದಾಗಿ ನಿರ್ಮಾಣ ಮಾಡಿರುವ 110ಕೆವಿ ಮಾರ್ಗದ ಉದ್ದ ಸುಮಾರು 8.0 ಕಿ.ಮೀ. ಮತ್ತು ಈ. ಪ್ರಸರಣ ಮಾರ್ಗವು ಗೂಗಲ್, ಚಿಕ್ಕರಾಯಕುಂಪಿ, ಹಿರೆರಾಯಕುಂಪಿ, ಮದರಕಲ್ ಮತ್ತು ಅಪ್ರಾಳ್ ಗ್ರಾಮಗಳ ಸೀಮಾಂತರದಲ್ಲಿ ಹಾದು ಹೋಗುತ್ತಿದ್ದು ಈ ಪ್ರಸರಣ ಮಾರ್ಗವನ್ನು ಫೆ.5 ಅಥವಾ ನಂತರದ ದಿನಗಳಲ್ಲಿ ವಿದ್ಯುದೀಕರಿಸಲಾಗುವುದು.
ಕಾರಣ ಸಾರ್ವಜನಿಕರು ಈ ಮೇಲೆ ತಿಳಿಸಿದ ಮಾರ್ಗಗಳ ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲೀ, ಅವುಗಳಿಗೆ ದನಕರುಗಳನ್ನು ಕಟ್ಟುವುದಾಗಲಿ, ಹಸಿರುಬಳ್ಳಿ ಅಥವಾ ಲೋಹದ ತಂತಿಗಳನ್ನು ಎಸೆಯುವುದಾಗಲೀ ಮಾಡಬಾರದು. ಇದರಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾಗೂ ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಮೇಲೆ ತಿಳಿಸಿರುವ ಯಾವುದೇ ದುಷ್ಟುತಗಳನ್ನು ಎಸಗಿ ಅಪಘಾತ ಅಥವಾ ಹಾನಿ ಉಂಟಾದಲ್ಲಿ ಅಂತಹ ಹಾನಿಗೆ ಕೃತ್ಯಗಳನ್ನು ಎಸಗಿದವರೇ ಜವಾಬ್ದಾರರಾಗಿರುತ್ತಾರೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹ ಅಭಿಯಂತರರು ತಿಳಿಸಿದ್ದಾರೆ.
