

ಬಳ್ಳಾರಿ, 23 ಜನವರಿ(ಹಿ.ಸ):
ಆ್ಯಂಕರ್: ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳಿದ್ದು, ಸರ್ಕಾರದ ಯೋಜನೆಗಳ ಮೂಲಕ ಆರ್ಥಿಕವಾಗಿ – ಸಾಮಾಜಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಎನ್ಆರ್ಎಲ್ಎಂ ಯೋಜನೆಯಡಿ ಎಸ್ಎಚ್ಜಿ ಮಹಿಳೆಯರಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಮಂಗಳವಾರ ನಡೆದ `ಘನ ಮತ್ತು ದ್ರವ ತ್ಯಾಜ್ಯ ಘಟಕಗಳ ನಾಲ್ಕು ಚಕ್ರದ ವಾಹನ ಚಾಲನಾ ತರಬೇತಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಾಹನಕ್ಕೆ ವಾಹನ ಚಾಲಕಿಯರನ್ನಾಗಿ ಸ್ವ-ಸಹಾಯ ಗುಂಪಿನ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಈ ಮಹಿಳೆಯರು ಧೈರ್ಯದಿಂದ ವಾಹನ ಚಾಲನೆ ಮಾಡಿ, ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಪ್ರಮೋದ್.ಪಿ., ಅವರು, ಗ್ರಾಮೀಣ ಭಾಗದಲ್ಲಿ ಸ್ವಚ್ಚತೆಯಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ. ವಾಹನ ಚಾಲನಾ ತರಬೇತಿ ಪಡೆಯದೆ ಇರುವ ಮಹಿಳೆಯರಿಗೆ ತರಬೇತಿ ಆಯೋಜಿಸಲಾಗಿದೆ ಎಂದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಏಜಿಎಂ ಹಾಗೂ ಡಿ.ವಿ.ಪಿ.ಆರ್ ಮುರಳಿಕೃಷ್ಣ, ಖಾಗ್ರಾ ಉಪ ನಿರ್ದೇಶಕ ಸಾದಿಕ್ ಉಲ್ಲಾ, ತಾಪಂ ಇಒ ಮಡಿಗಿನ ಬಸಪ್ಪ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕ ಶರಣಬಸವ ರೆಡ್ಡಿ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ರಾಜೇಸಾಬ್ ಎರಿಮನಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ, ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ, ಉಪನ್ಯಾಸಕ ಜಡೇಶ ಸೇರಿದಂತೆ ಸಿದ್ದಲಿಂಗಮ್ಮ, ಸಂತೋಷ ಕುಮಾರ ಉಪಸ್ಥಿತರಿದ್ದರು. ತರಬೇತಿಯಲ್ಲಿ 30 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.
