ಬೆಂಗಳೂರು, 21 ಜನವರಿ(ಹಿ.ಸ):
ಆ್ಯಂಕರ್ :
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಆ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸೂಚನೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಿ. ಕಾನೂನು ವಿರೋಧಿ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.
ಇನ್ನು ಬೆಂಗಳೂರಿನಾದ್ಯಂತ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆ ಕಣ್ಣಿಟ್ಟಿದೆ. ಯಾವುದೇ ರ್ಯಾಲಿಗಳಿಗೆ ಅವಕಾಶ ಇಲ್ಲ. ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಕ್ಕೆ ಯಾವುದೇ ಅಭ್ಯಂತರ ಇಲ್ಲ. ಸದ್ಯ ಪೊಲೀಸರು ಈಗಾಗಲೇ ಧಾರ್ಮಿಕ ಮುಖಂಡರ ಸಭೆ ಮಾಡಿದ್ದು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕಿವಿ ಮಾತು ಹೇಳಿದ್ದಾರೆ.
ಮಂಗಳೂರು ನಗರದಾದ್ಯಂತ ಪೊಲೀಸರ ಕಟ್ಟೆಚ್ಚರ
ಮತ್ತೊಂದೆಡೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನಲೆ ಮಂಗಳೂರು ನಗರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಮಧ್ಯರಾತ್ರಿಯಿಂದ 23ರ ಮುಂಜಾನೆವರೆಗೆ ಮದ್ಯ ಮಾರಾಟ ಬಂದ್ಗೆ ಪ್ರಸ್ತಾವನೆ ಹೊರಡಿಸಲಾಗಿದೆ. ಫ್ಲೆಕ್ಸ್, ಬಂಟಿಂಗ್ಸ್ ಗಳ ಮೇಲೆ ನಿಗಾ ಇಡಲು ಪಾಲಿಕೆಗೆ ಸೂಚನೆ ನೀಡಿದೆ. 196 ಕಡೆ ಧಾರ್ಮಿಕ ಕಾರ್ಯಕ್ರಮ ಸ್ಥಳ ಗುರುತು ಮಾಡಿ ನಿಗಾ ಇಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್
