ಬೆಂಗಳೂರು, 15 ಜನವರಿ(ಹಿ.ಸ):
ಆ್ಯಂಕರ್ :
ಹಾನಗಲ್ ತಾಲೂಕಿನಲ್ಲಿ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತನಿಖೆ ಸರಿಯಾಗಿ ನಡೆಸದಿದ್ದರೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಇಂದು ಹಾವೇರಿಗೆ ಭೇಟಿ ನೀಡಲಿದ್ದಾರೆ.
ತಾಲೂಕಿನಲ್ಲಿನ ಸಾಮೂಹಿಕ ಅತ್ಯಾಚಾರ ಆರೋಪ ಕೇಸ್ ದಿನಕ್ಕೊಂದು ಹೊಸ ತಿರುವು ತೆಗೆದುಕೊಳ್ಳುತ್ತಿದೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಪ್ರಕರಣ ಮುಚ್ಚಿ ಹಾಕುತ್ತಿದ್ದರು. ತನಿಖೆ ಸರಿಯಾಗಿ ನಡೆಯದೇ ಇದ್ದರೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಹಾಗೆಯೇ ಇದನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದಿದ್ದಾರೆ. ಪೊಲೀಸರು ಕೂಡ ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ ಎಂದಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯೂ ಘಟನೆ ಬಗ್ಗೆ ಮಾತನಾಡುತ್ತಿಲ್ಲದಿರುವುದು ನನಗೆ ಆಶ್ಚರ್ಯವಾಗುತ್ತಿದೆ. ರಾಜ್ಯದಲ್ಲಿ ಜಂಗಲ್ ರಾಜ್ಯ ನಡೆಯುತ್ತಿದೆಯಾ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ.
ಸಿಎಂ ಭೇಟಿ
ಬಿಜೆಪಿ ಆರೋಪ ಒಂದು ಕಡೆಯಾದರೆ ಸಿಎಂ ಸಿದ್ದರಾಮಯ್ಯ ಇಂದು ಹಾವೇರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಸಂತ್ರಸ್ತೆಯನ್ನು ಭೇಟಿಯಾಗಿ ಘಟನೆ ಬಗ್ಗೆ ವಿವರ ತಿಳಿದುಕೊಳ್ಳಲಿದ್ದಾರೆ. ಸಂತ್ರಸ್ತೆಯು ಆರೋಪಿಗಳನ್ನು ಬಂಧಿಸದೇ ಬೇರೆಯವರನ್ನು ಬಂಧಿಸಲಾಗಿದೆ ಎಂದಯ ಆರೋಪಿಸಿದ್ದಾಳೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ಮುಜುಗರದಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆಗೆ ಸರಿಯಾದ ಚಿಕಿತ್ಸೆ ನೀಡದೆ ಶಿರಸಿಗೆ ಶಿಫ್ಟ್ ಮಾಡಿದ್ದಾರೆ ಎಂಬ ಆರೋಪ ಪೊಲೀಸರ ವಿರುದ್ಧ ಕೇಳಿಬಂದಿದೆ. ಬಿಜೆಪಿ ಎಸ್ಐಟಿ ತನಿಖೆಗೆ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಇವತ್ತಿನ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಹಿಂದೂಸ್ತಾನ್ ಸಮಾಚಾರ್
