ಬೆಂಗಳೂರು, 12 ಜನವರಿ(ಹಿ.ಸ):
ಆ್ಯಂಕರ್ :ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಮದುವೆ ವಿಚಾರ ಆಗಾಗ ಚರ್ಚೆ ಆಗುತ್ತದೆ. ಅವರನ್ನು ಮದುವೆ ಆದ ವಿಚಾರಕ್ಕೆ ನಟಿ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಈಗ ರವೀಂದರ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಒಂದು ವಾರದಿಂದ ಟ್ರೀಟ್ಮೆಂಟ್ ಕೊಡಲಾಗುತ್ತಿದೆ. ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದೆ ಎನ್ನಲಾಗಿದೆ.
ಮಹಾಲಕ್ಷ್ಮಿ ಅವರು ಹಣಕ್ಕಾಗಿ ರವೀಂದರ್ ಅವರನ್ನು ಮದುವೆಯಾದರು ಎನ್ನುವ ಮಾತು ಕೇಳಿ ಬಂದವು. ಮಹಾಲಕ್ಷ್ಮಿ ಅವರಂಥ ಸುಂದರ ನಟಿಯನ್ನು ಮದುವೆಯಾಗಲು ರವೀಂದರ್ ಅನೇಕ ಕುತಂತ್ರಗಳನ್ನು ಮಾಡಿದ್ದಾರೆ ಎಂಬ ಆರೋಪಗಳೂ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಟ್ರೋಲ್ಗಳು ಆದವು. ಅದಾದ ನಂತರ ವಂಚನೆ ಪ್ರಕರಣದಲ್ಲಿ ರವೀಂದರ್ ಜೈಲಿಗೆ ಹೋಗಿದ್ದರು. ಈ ವೇಳೆ ಮಹಾಲಕ್ಷ್ಮಿ ಪತಿಗೆ ವಿಚ್ಛೇದನ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬಂದವು. ಆದರೆ, ಮಹಾಲಕ್ಷ್ಮಿ ಮತ್ತು ರವೀಂದರ್ ಈ ರೀತಿಯ ಟ್ರೋಲ್ಗಳಿಗೆ ತಲೆಕೆಡಿಸಿಕೊಂಡಿಲ್ಲ.
ರವೀಂದರ್ ಸದ್ಯ ಯೂಟ್ಯೂಬ್ನಲ್ಲಿ ತಮಿಳಿನ ಬಿಗ್ ಬಾಸ್ ಸೀಸನ್ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಮಾಡಿದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಕಾರಣ ಅವರು ಆಮ್ಲಜನಕದ ಮಾಸ್ಕ್ ಹಾಕಿ ಕಾಣಿಸಿಕೊಂಡಿದ್ದು. ಅನಾರೋಗ್ಯದ ನಡುವೆಯೂ ಅವರು ಬಿಗ್ ಬಾಸ್ ಸೀಸನ್ನಲ್ಲಿ ವಿಮರ್ಶೆಗಳನ್ನು ನೀಡಿರುವುದು ಗಮನಾರ್ಹವಾಗಿದೆ.
ಆರೋಗ್ಯ ಸರಿ ಇಲ್ಲದ ಕಾರಣ ರವೀಂದರ್ ಅವರು ಈ ರೀತಿ ಮಾಡಿದ್ದಾರೆ. ಇತ್ತೀಚೆಗೆ ಅವರ ಶ್ವಾಸಕೋಶಕ್ಕೆ ಸೋಂಕು ತಗುಲಿತ್ತಂತೆ. ಉಸಿರಾಡಲು ಕಷ್ಟವಾಗಿದೆ. ಒಂದು ವಾರದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರವೇ ಅವರು ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಮಹಾಲಕ್ಷ್ಮಿ ಎಲ್ಲಿಗೆ ಹೋದರು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
