
ಬಳ್ಳಾರಿ, 9 ಜನವರಿ(ಹಿ.ಸ):
ಆ್ಯಂಕರ್ : ಬೆಂಗಳೂರಿನಲ್ಲಿ ನಡೆದ 2023-24ನೇ ಸಾಲಿನ ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟಗಳಲ್ಲಿ ಬಳ್ಳಾರಿ ಜಿಲ್ಲೆಯ ಗೃಹರಕ್ಷಕರ ಕ್ರೀಡಾಪಟುಗಳಿಗೆ ಚಾಂಪಿಯನ್ಶಿಫ್ ಸಂದಿದೆ.
ಬಳ್ಳಾರಿ ಜಿಲ್ಲಾ ಸಮಾದೇಷ್ಟರಾದ ಬಸವರಾಜ ಅಗಸರ ಅವರು ಈ ಮಾಹಿತಿ ನೀಡಿದ್ದು, ಮುಂಡ್ಕೂರ್ ತರಬೇತಿ ಅಕಾಡೆಮಿಯ ಮೈದಾನದಲ್ಲಿ ಜ.08 ರಂದು ನಡೆದ ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವರಾದ ಪರಮೇಶ್ವರ ಅವರು ಮತ್ತು ಪೊಲೀಸ್ ಮಹಾನಿರೀಕ್ಷಕರಾದ ಅಲೋಕ್ ಮೋಹನ್ ಅವರು ಕಪ್ ವಿತರಣೆ ಮಾಡಿದ್ದಾರೆ.
2023-24ನೇ ಸಾಲಿನ ಗೃಹರಕ್ಷಕರ ವೃತ್ತಿಪರ ಹಾಗೂ ಕ್ರೀಡಾಕೂಟಗಳಲ್ಲಿ ಈಶಾನ್ಯ ವಲಯದ 65 ಜನ ಗೃಹರಕ್ಷಕರು ಭಾಗವಹಿಸಿದ್ದರು. ಕ್ರೀಡೆಗಳಾದ 100 ಮೀ ಓಟ, 400 ಮೀ ಓಟ, 800 ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ ಮತ್ತು ವೃತ್ತಿಪರ ಕ್ರೀಡೆಗಳಾದ ಪ್ರಥಮ ಚಿಕಿತ್ಸೆ, ಆಗ್ನಿ ಶಮನ, ರೈಫಲ್ ಡ್ರಿಲ್, ರಕ್ಷಣೆ ಮತ್ತು ರೈಫಲ್ ಸಹಿತ ಶೂಟಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಬಳ್ಳಾರಿ ತಂಡವು ಪುರುಷರ ವಿಭಾಗದಲ್ಲಿ ಈಶಾನ್ಯ ವಲಯದ ವೃತ್ತಿಪರ ಕ್ರೀಡೆಗಳಾದ ರೈಫಲ್ ಡ್ರಿಲ್, ರಕ್ಷಣೆ ಮತ್ತು ಆಗ್ನಿ ಶಮನ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಮತ್ತು ಮಹಿಳಾ ವಿಭಾಗದಲ್ಲಿ ಪ್ರಥಮ ಚಿಕಿತ್ಸೆಯಲ್ಲಿ ಪ್ರಥಮ ಸ್ಥಾನ ಮತ್ತು ರೈಫಲ್ ಡ್ರಿಲ್ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವೃತ್ತಿಪರ ಕ್ರೀಡೆ ಮತ್ತು ಎಲ್ಲಾ ತರಹದ ಕ್ರೀಡೆಗಳಲ್ಲಿ ಈಶಾನ್ಯ ವಲಯ ಮಟ್ಟದ ಬಳ್ಳಾರಿ ಜಿಲ್ಲೆಯ ಕ್ರೀಡಾಪಟುಗಳು “ಚಾಂಪಿಯನ್ಶಿಫ್ ಕಪ್” ಪಡೆದಿದ್ದಾರೆ.
