ಕೋಲಾರ, ಜನವರಿ ೦೪ (ಹಿ.ಸ) :
ಆ್ಯಂಕರ್ : ಕಾನೂನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯ ನಮಗೆ ಕಾನೂನು ಗೊತ್ತಿಲ್ಲ ಎಂದು ಯಾರು ಹೇಳುವಹಾಗಿಲ್ಲ. ಕಾನೂನು ತಿಳಿದುಕೊಂಡು ಅನುಸರಿಸಿದರೆ ಕಾನೂನು ಅವರನ್ನು ರಕ್ಷಿಸುತ್ತದೆ ಕಾನೂನು ಮುಂದೆ ಎಲ್ಲರೂ ಸಮಾನರು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್. ಹೊಸಮನಿ ತಿಳಿಸಿದರು.
ರಾಷ್ಟಿçಯ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟಿçಯ ಮಹಿಳಾ ಆಯೋಗ, ನವದೆಹಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್, ವೇಮಗಲ್ ಕೋಲಾರ ತಾಲ್ಲೂಕು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ, ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದು, ಅದರ ಬಗ್ಗೆ ಎಲ್ಲರು ತಿಳಿದುಕೊಳ್ಳಬೇಕು. ಇತ್ತೀಚಿಗೆ ಲಿಂಗಪತ್ತೆ ಮಾಡುವುದು, ಬಾಲ್ಯ ವಿವಾಹ ಮಾಡುವುದು ಹೆಚ್ಚಾಗುತ್ತಿದೆ, ಆ ಬಗ್ಗೆ ಕಾನೂನುಗಳು ಜಾರಿಯಲ್ಲಿದ್ದರು ಸಹ ಅಂತಹ ಘಟನೆಗಳು ನಡೆಯುತ್ತಿವೆ. ಮಕ್ಕಳನ್ನು ಶಾಲೆಗೆ ಕಳುಹಿಸದೆ ಬಾಲ ಕಾರ್ಮಿಕರಾಗಿ ದುಡಿಸುತ್ತಿದ್ದಾರೆ, ಅದು ಕಾನೂನು ಅಡಿಯಲ್ಲಿ ಅಪರಾಧ. ಭಾರತ ಸಂವಿಧಾನ ಅಡಿಯಲ್ಲಿ ೦೬ ರಿಂದ ೧೪ ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಹಕ್ಕು ಕೊಡಲಾಗಿದೆ. ಸದರಿ ಮಕ್ಕಳಿಗೆ ಶಿಕ್ಷಣ ಕೊಡಿಸದಿದ್ದರೆ ಅದು ಮಕ್ಕಳ ಹಕ್ಕಿನ ಉಲ್ಲಂಘನೆ ಆಗುತ್ತದೆ. ಪಾಲಕರು ಕಡ್ಡಾಯವಾಗಿ ೦೬ ರಿಂದ ೧೪ ವರ್ಷದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಹಾಗೂ ಒಳ್ಳೆಯ ಶಿಕ್ಷಣಕೊಡಿಸಬೇಕು, ಆಗ ಮಾತ್ರ ಮಕ್ಕಳು ಒಳ್ಳೆಯ ಪ್ರಜೆಗಳಾಗಿ ಬೆಳೆಯಬಹುದು. ಮಹಿಳೆಯರು ಹಲವಾರು ರಂಗಗಳಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿದ್ದು, ಅವರ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಜಾರಿಗೆ ತಂದಿರುತ್ತಾರೆ. ಈ ಕಾನೂನುಗಳನ್ನು ತಿಳಿದುಕೊಂಡು ಅವರ ರಕ್ಷಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್, ವೇಮಗಲ್ ವತಿಯಿಂದ ಶಿಕ್ಷಣ ಆರೋಗ್ಯ ಹಾಗೂ ಹಳ್ಳಿಗಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅದರಿಂದಾಗಿ ಹಳ್ಳಿಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಸ್ವಂತ ಉದ್ಯೋಗಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಈ ಮಹಿಳೆಯರು ತಮ್ಮ ಕೆಲಸದ ಜೊತೆ ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ, ಪೋಷಣೆ ಮಾಡುವ ಜವಾಬ್ದಾರಿ ಹೊಂದಿದ್ದು, ಅವರು ಅವಶ್ಯಕ ಕಾನೂನು ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಸದಸ್ಯ ಕಾರ್ಯದರ್ಶಿಗಳು ತಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ, ಮಹಿಳಾ ದೌರ್ಜನ್ಯ ತಡೆ ಕಾಯ್ದೆ, ಲಿಂಗಪತ್ತೆ ನಿಷೇಧ ಕಾಯ್ದೆ, ಹೆಣ್ಣು ಭ್ರೂಣ ಹತ್ಯೆ ತಡೆ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಎಲ್ಲಾ ರಂಗಗಳಲ್ಲಿ ಮಹಿಳೆಯರು ಪಾತ್ರ ನಿರ್ವಹಿಸುತ್ತಿದ್ದು, ಅವರು ತಮ್ಮ ಕುಟುಂಬ ನಿರ್ವಹಣೆಯ ಜೊತೆಗೆ ಸ್ವಂತ ಉದ್ಯೋಗಗಳನ್ನು ಸಹ ಮಾಡುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ನಿಂದ ಸಹಾಯ ಮಾಡಲಾಗುತ್ತಿದೆ ಎಂದು ವಕೀಲರ ಸಂಘದ ಅಧ್ಯಕ್ಷರಾದ ಎಂ. ಮುನೇಗೌಡ ಅವರು ತಿಳಿಸಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ನಿವೃತ್ತ ಶಿಕ್ಷಕಿ ಮಂಜುಳಾ ಭೀಮ್ರಾವ್ ಅವರು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು. ಸದಸ್ಯ ಕಾರ್ಯದರ್ಶಿಗಳು ಕೊನೆಯಲ್ಲಿ ಬಾಲ್ಯ ವಿವಾಹ ತಡೆಯುವ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಾದೇಶಿಕ ನಿರ್ದೇಶಕ ಸೀನಪ್ಪ ಎಂ, ಕೋಲಾರ ಜಿಲ್ಲೆಯ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ನ ನಿರ್ದೇಶಕ ಪದ್ಮಯ್ಯ ಸಿ.ಹೆಚ್. ಬೆಂಗಳೂರು ಸಹಾಯಕ ನಿಯಂತ್ರಕಿ ಮಾಣಿಕ್ಯ ಹೆಚ್.ಎಂ. ವೇಮಗಲ್ನ ಗೌಡರ ಚಿಕ್ಕಮುನಿಯಪ್ಪ ಭಾಗವಹಿಸಿದ್ದರು.
