ಕೇಪ್ ಟೌನ್, 4 ಜನವರಿ(ಹಿ.ಸ):
ಆ್ಯಂಕರ್ :
ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದೆ. ನ್ಯೂಲ್ಯಾಂಡ್ಸ್ ಕ್ರೀಡಾಂಗದಲ್ಲಿ ನಿನ್ನೆ ಆರಂಭವಾದ ಪಂದ್ಯದಲ್ಲಿ ೯೮ ರನ್ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ದಿನದಾಟದ ಮುಕ್ತಾಯಕ್ಕೆ ೧೭ ಓವರ್ ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸಿದೆ. ಮೊದಲ ಇನಿಂಗ್ಸ್ ಹಿನ್ನಡೆ ತಪ್ಪಿಸಲು ಇನ್ನು ೩೬ ರನ್ ಗಳಿಸಬೇಕಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ ೧೫ ರನ್ ಗೆ ಆರು ವಿಕೆಟ್ ಪಡೆದು ಸ್ಮರಣೀಯ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ ದಾಳಿಗೆ ತತ್ತರಿಸಿ ೫೫ ರನ್ ಗಳಿಗೆ ಸೀಮಿತಗೊಂಡಿತು. ಇದಕ್ಕೆ ಪ್ರತಿಯಾಗಿ ಇನಿಂಗ್ಸ್ ಆರಂಭಿಸಿದ ಭಾರತ, ೩೪.೫ ಓವರ್ ಗಳಲ್ಲಿ ೧೫೩ ರನ್ ಗಳಿಗೆ ಆಲೌಟಾಯಿತು. ರೋಹಿತ್ ಶರ್ಮಾ, ಶುಬ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ೩೯, ೩೬ ಮತ್ತು ೪೬ ರನ್ ಗಳಿಸಿದರೆ, ಆರು ಮಂದಿ ಬ್ಯಾಟರ್ ಗಳು ಶೂನ್ಯಕ್ಕೆ ಔಟಾದರು. ಹೀಗಾಗಿ ಉತ್ತಮ ಮೊತ್ತ ಕಲೆಹಾಕುವ ಭಾರತದ ಯೋಜನೆ ಕೈಗೂಡಲಿಲ್ಲ.
ಹಿಂದೂಸ್ತಾನ್ ಸಮಾಚಾರ್
