ಬೆಂಗಳೂರು, 3 ಜನವರಿ(ಹಿ.ಸ):
ಆ್ಯಂಕರ್ :
ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಹರಿಹಾಯ್ದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತರ ಬಂಧನ ಖಂಡಿಸಿ ಇಂದು ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಬೆಳಿಗ್ಗೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಹಿಂದೂ ವಿರೋಧಿ ಎಂಬುದನ್ನು ಈ ಸರ್ಕಾರವು ರಾಜ್ಯ ಮತ್ತು ದೇಶದ ಜನತೆಗೆ ಪದೇಪದೇ ನೆನಪು ಮಾಡುವ ಕೆಲಸ ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ 31 ವರ್ಷದ ಹಳೆಯ ಪ್ರಕರಣಕ್ಕೆ ಮರುಜೀವ ನೀಡಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಪಕ್ಷ ಬಲವಾಗಿ ಖಂಡಿಸುತ್ತದೆ ಎಂದರು.
ದೇಶವೇ ಸಂಭ್ರಮದಲ್ಲಿ ಇರುವಾಗ ರಾಮಭಕ್ತನನ್ನು ಬಂಧಿಸುವುದಾದರೆ ನಿಮಗೆಷ್ಟು ಧೈರ್ಯ? ಕಾನೂನು- ಸುವ್ಯವಸ್ಥೆಗೆ ಭಂಗ ತರುವ ದುಸ್ಸಾಹಸಕ್ಕೆ ಮುಖ್ಯಮಂತ್ರಿಗಳೇ ಕೈ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಆದ್ಯತೆ ಯಾವುದು? ಸಂದರ್ಭ ಮತ್ತು ನಿಮ್ಮ ಉದ್ದೇಶ ಏನು ಎಂದು ಖಾರವಾಗಿ ಪ್ರಶ್ನಿಸಿದರು. ಈ ತಿಂಗಳ 22ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಠಾಪನೆ ಆಗುವ ಶುಭ ಸಂದರ್ಭದಲ್ಲಿ ಇಡೀ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಕೋಟ್ಯಂತರ ಹಿಂದೂ ಕಾರ್ಯಕರ್ತರು ಸಂತಸದಲ್ಲಿದ್ದಾರೆ. ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಇದೆ. ಇಂಥ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಕೈಗೊಂಡ ಕ್ರಮದ ಮೂಲಕ ತಮ್ಮದು ಹಿಂದೂ ವಿರೋಧಿ ಸರ್ಕಾರ ಎಂದು ದೇಶಕ್ಕೇ ತೋರಿಸಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಿಂದೂಸ್ತಾನ್ ಸಮಾಚಾರ್
