

ಬಳ್ಳಾರಿ, 15 ಡಿಸೆಂಬರ್(ಹಿ.ಸ):
ಆ್ಯಂಕರ್ : ಸರ್ಕಾರಿ ವಸತಿ ನಿಯಲಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಧಿಕಾರಿಗಳ, ಗುತ್ತಿಗೆದಾರರು ಮತ್ತು ಕಾರ್ಮಿಕರ ಸಂಘದ ಪದಾಧಿಕಾರಿಗಳ ಜಂಟಿ ಸಭೆ ನಡೆಸಲು ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ (ರಿ)ದ ಜಿಲ್ಲಾ ಘಟಕದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರ ನೇತೃತ್ವವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಡಾ. ಎನ್. ಪ್ರಮೋದ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ಹಾಸ್ಟೆಲ್ಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು ಕನಿಷ್ಟ ವೇತನ ಪಾವತಿಯು 4-5 ತಿಂಗಳಿಗೊಮ್ಮೆ ಬಟವಾಡೆ ಆಗುತ್ತಿದೆ.
ಏಪ್ರಿಲ್ 2023 ರಲ್ಲಿ ವೇತನ ಪರಿಷ್ಕøತಗೊಂಡಿದ್ದು ಆಗಸ್ಟ್ 2023ವರೆಗಿನ ಹಿಂಬಾಕಿಯನ್ನು ಈವರೆಗೆ ಪಾವತಿ ಮಾಡಿಲ್ಲ. ಗುತ್ತಿಗೆದಾರರು ಪಿಎಫ್ ಹಣವನ್ನು ಭವಿಷ್ಯನಿಧಿ ಇಲಾಖೆಗೆ ಸಮರ್ಪಕವಾಗಿ ಪಾವತಿಸುತ್ತಿಲ್ಲ. ಈ ಹಿಂದಿನ ಏಜೆನ್ಸಿಯ ತಪ್ಪುಗಳ ಕಾರಣ ಕಾರ್ಮಿಕರು ಈವರೆಗೂ ಪಿಎಫ್ ಹಣವನ್ನು ಪಡೆಯಲು ಅಥವಾ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಗುತ್ತಿಗೆದಾರರು ಪೇಮೆಂಟ್ ಸ್ಲಿಪ್, ರಜಾ ಸೌಲಭ್ಯ, ನೇಮಕಾತಿ ಆದೇಶ ನೀಡುತ್ತಿಲ್ಲ. ಈ ಸಮಸ್ಯೆಗಳಿಗೆ ಪರಿವಾರ ಸಿಗುತ್ತಿಲ್ಲ. ಕಾರಣ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯಾ ಇಲಾಖೆಗಳ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಕಾರ್ಮಿಕರ ಸಂಘದ ಪದಾಧಿಕಾರಿಗಳ ಜಂಟಿ ಸಭೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಎ. ದೇವದಾಸ್ ಅವರು ಮಾತನಾಡಿದರು. ವಸತಿನಿಲಯ ಕಾರ್ಮಿಕ ಸಂಘದ ಕಾರ್ಯದರ್ಶಿ ಜಿ. ಸುರೇಶ್, ಮುಖಂಡರಾದ ಲಕ್ಷ್ಮಿ, ಮುರಳಿಕೃಷ್ಣ, ಈಶ್ವರಮ್ಮ, ಜಯರಾಂ, ಮಲ್ಲಯ್ಯ, ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.
