
ಧಾರವಾಡ, 14 ಡಿಸೆಂಬರ್(ಹಿ.ಸ):
ಆ್ಯಂಕರ್ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಡಿಸೆಂಬರ್ 16 ರಂದು ಧಾರವಾಡಕ್ಕೆ ಆಗಮಿಸಿ ಸಂಜೆ ಕಾರ್ಮಿಕ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಕೆಸಿಡಿ ಮೈದಾನದಲ್ಲಿ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿದೆ. ಈಗಾಗಲೇ ತ್ರಿಚಕ್ರ ವಾಹನಗಳು ಕೆಸಿಡಿ ಮೈದಾನದಲ್ಲಿ ಇರಿಸಲಾಗಿದ್ದು, ವೇದಿಕೆಯನ್ನು ನಿರ್ಮಿಸಲಾಗುತ್ತಿದೆ.
ಈ ಕುರಿತು ಜಿಲ್ಲಾ ಉಸ್ತವಾರಿ ಸಚಿವರಾದ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಈಗಾಗಲೇ ಅಧಿಕಾರಿಗಳ ಸಭೆ ನಡಸಿ ಕಾರ್ಯಕ್ರಮದ ಯಶಸ್ಸಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತರಾದ ನಾಗೇಶ ಡಿ.ಜಿ. ಹಾಗೂ ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಎನ್ ಕಾರ್ಮಿಕ ಅಧಿಕಾರಿಗಳು, ಅಂಗವಿಕಲ ಕಲ್ಯಾಣಾಧಿಕಾರಿಗಳು, ಕೆಸಿಡಿ ಮೈದಾನದಲ್ಲಿ ಬೀಡು ಬಿಟ್ಟಿದ್ದು, ಕಾರ್ಯಕ್ರಮದ ಸಿದ್ಧತೆಯಲ್ಲಿದ್ದಾರೆ.
ಡಿಸೆಂಬರ್ 16 ರಂದು ಸಂಜೆ 6 ಗಂಟೆಗೆ ಕೆಸಿಡಿ ಮೈದಾನದಲ್ಲಿ ಧಾರವಾಡ ಜಿಲ್ಲೆಯ ವಿಶೇಷ ಚೇತನರಿಗೆ ಮೋಟಾರು ಚಾಲಿತ ತ್ರಿಚಕ್ರ ವಾಹನಗಳ ವಿತರಣೆ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟ್ಯಾಪ್ ವಿತರಣೆ ಹಾಗೂ ಗಿಗ್ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. 126 ವಿವಿಧ ಕಂಪನಿಗಳು ತಮ್ಮ ಸಿಎಸ್ಆರ್ ಅನುದಾನದಡಿ 525 ತ್ರಿಚಕ್ರ ವಾಹನ ಹಾಗೂ ಸಂತೋಷ್ ಲಾಡ್ ಫೌಂಡೇಶನ್ನಿಂದ 25 ವಾಹನಗಳನ್ನು ವಿತರಿಸಲಾಗುತ್ತಿದೆ. ತ್ರಿಚಕ್ರ ವಾಹನ ಪ್ರಾಯೋಜಿಸಿದ ಕಂಪನಿಗಳ ಪ್ರತಿನಿಧಿಗಳಿಗೂ ಸಹ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ಗೌರವ ಸಮರ್ಪಿಸಲಾಗುವುದು.
ಕಾರ್ಮಿಕ ಇಲಾಖೆಯಿಂದ ಕಂಪನಿಗಳ ಸಿಎಸ್ಆರ್ ಅನುದಾನ ಪ್ರಾಯೋಜಕತ್ವದಡಿ ವಿಶೇಷ ಚೇತನರಿಗೆ ಒಂದೇ ವೇದಿಕೆಯಲ್ಲಿ 550 ತ್ರಿಚಕ್ರ ವಾಹನಗಳನ್ನು ನೀಡುತ್ತಿರುವುದು ಇತಿಹಾಸದಲ್ಲೇ ಇದೇ ಪ್ರಥಮ. ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 250 ಲ್ಯಾಪ್ಟ್ಯಾಪ್ಗಳನ್ನು ವಿತರಿಸಲಾಗುವುದು . 3 ಲಕ್ಷ ಕಾರ್ಮಿಕರಿಗೆ ವಿಮೆ ಸೌಲಭ್ಯ : ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್ಕಾರ್ಟ್, ಬಿಗ್ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ನಂತ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರಿಗೂ ಸರ್ಕಾರ ವಿಮೆ ಘೋಷಿಸಿದೆ. ವಿವಿಧ ಕಂಪನಿಗಳ ಡಿಲೇವರಿ ಕಾರ್ಮಿಕರಾಗಿ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ 2 ಲಕ್ಷ ಅಪಘಾತ ವಿಮೆ ಹಾಗೂ 2 ಲಕ್ಷ ಜೀವವಿಮೆಯನ್ನು ಸರ್ಕಾರವು ಇತ್ತಿಚಿಗೆ ಘೋಷಿಸಿದ್ದು, ಇಂತಹ ಗಿಗ್ ಕಾರ್ಮಿಕರ ನೋಂದಣಿ ಹಾಗೂ ಗುರುತಿನ ಚೀಟಿ ವಿತರಣೆಯ ಕಾರ್ಯಕ್ರಮವು ಈ ವೇದಿಕೆಯಲ್ಲಿ ಜರುಗಲಿವೆ.
ಹಿಂದೂಸ್ತಾನ್ ಸಮಾಚಾರ್
